Advertisement

ಭ್ರಷ್ಟಾಚಾರ ಪ್ರಕರಣ: ಸಚಿವ ಎಸ್‌.ಟಿ.ಸೋಮಶೇಖರ್‌ ಸಲ್ಲಿಸಿದ್ದ ಅರ್ಜಿ ವಜಾ

10:44 PM Oct 10, 2022 | Team Udayavani |

ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಎಸ್‌.ಟಿ.ಸೋಮಶೇಖರ್‌, ಐಎಎಸ್‌ ಅಧಿಕಾರಿ ಜಿ.ಸಿ.ಪ್ರಕಾಶ್‌ ಮತ್ತು ಉದ್ಯಮಿ ಕೆ.ರವಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

Advertisement

2019-21ರ ಅವಧಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಮಾಣ ಯೋಜನೆಯ ಗುತ್ತಿಗೆಯನ್ನು ನೀಡಲು ಖಾಸಗಿ ನಿರ್ಮಾಣ ಸಂಸ್ಥೆಯಿಂದ 12 ಕೋಟಿ ರೂ. ಲಂಚ ಪಡೆಯಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಹೋರಾಟಗಾರ ಟಿ.ಜೆ.ಅಬ್ರಹಾಂ ಅವರ ದೂರಿನ ಮೇರೆಗೆ ಆರೋಪಿಗಳಾದ ಬಿಎಸ್‌ವೈ, ಅವರ ಪುತ್ರ ಬಿ.ವೈ.ವಿಜಯೇಂದ್ರ, ಅಳಿಯ ಸಂಜಯ್‌ ಶ್ರೀ, ಮೊಮ್ಮಗ ಶಶಿಧರ ಮರಾಡಿ, ಸಚಿವರಾದ ಎಸ್‌.ಟಿ.ಸೋಮಶೇಖರ್‌, ಅಧಿಕಾರಿ ಜಿ.ಸಿ.ಪ್ರಕಾಶ್‌ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿತ್ತು.

ಸೆ.23ರಂದು ಸುಪ್ರೀಂ ಕೋರ್ಟ್‌, ಬಿಎಸ್‌ವೈ ವಿರುದ್ಧದ ತನಿಖೆಗೆ ತಡೆಯಾಜ್ಞೆ ತಂದಿತ್ತು. ಅದರ ಬೆನ್ನಲ್ಲೇ ಎಫ್ಐಆರ್‌ ಅನ್ನು ಪ್ರಶ್ನಿಸಿ ಸಚಿವ ಸೋಮಶೇಖರ್‌, ಪ್ರಕಾಶ್‌ ಹಾಗೂ ಕೆ.ರವಿ ಅವರು ಸುಪ್ರೀಂಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ.ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ಅರ್ಜಿಯನ್ನು ತಿರಸ್ಕರಿಸಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ರೋಹಟಗಿ, ದೇವದತ್‌ ಕಾಮತ್‌ ಮತ್ತು ಸಿದ್ಧಾರ್ಥ್ ದವೆ ಅವರು ಸೆ.7ರ ಹೈಕೋರ್ಟ್‌ ಆದೇಶದ ಮಾನ್ಯತೆಯನ್ನು ಪ್ರಶ್ನಿಸಿದರು. ಕೆಲ ಕಾಲ ವಿಚಾರಣೆ ನಡೆದ ಬಳಿಕ, ಅರ್ಜಿದಾರರ ಪರ ವಕೀಲರೇ ಅರ್ಜಿ ವಾಪಸ್‌ ಪಡೆಯುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next