ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆಯಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರಾಲಿಯ ಹಿಂಸಾಚಾರ ಪ್ರಕರಣದ ತನಿಖೆ ನಡೆಸಲು ಆದೇಶ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪುರಸ್ಕರಿಸಲು ಬುಧವಾರ(ಫೆ.02) ತಿರಸ್ಕರಿಸಿದೆ. ಅಲ್ಲದೇ ಯಾವುದೇ ಪುರಾವೆಗಳಿಲ್ಲದೆ ರೈತರನ್ನು ಮಾಧ್ಯಮಗಳು “ಉಗ್ರರು” ಎಂಬಂತೆ ಬಿಂಬಿಸಬಾರದು ಎಂದು ನಿರ್ದೇಶನ ನೀಡಿದೆ.
ಇದನ್ನೂ ಓದಿ:ಥಿಯೇಟರ್‌ಗಳಲ್ಲಿ ಶೇ.50 ಸೀಟಿಗೆ ಮಾತ್ರ ಅವಕಾಶ:ಸರ್ಕಾರದ ದ್ವಂದ್ವನೀತಿಗೆ ಸಿನಿಮಂದಿ ಸಿಡಿಮಿಡಿ
ಟ್ರ್ಯಾಕ್ಟರ್ ರಾಲಿ ಹಿಂಸಾಚಾರ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಿಜೆಐ ಎಸ್ ಎ ಬೋಬ್ಡೆ, ಜಸ್ಟೀಸ್ ಗಳಾದ ಎಎಸ್ ಬೋಪಣ್ಣ, ವಿ.ರಾಮಸುಬ್ರಮಣಿಯನ್ ನೇತೃತ್ವದ ಪೀಠ ನಿರಾಕರಿಸಿತು. ಮತ್ತು ಮೂವರು ಅರ್ಜಿದಾರರು ತಮ್ಮ ಮನವಿಯೊಂದಿಗೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ, ಅಲ್ಲಿ ಪ್ರಾತಿನಿಧ್ಯ ನೀಡುವಂತೆ ಕೇಳಿಕೊಳ್ಳಲು ಸೂಚಿಸಿರುವುದಾಗಿ ವರದಿ ತಿಳಿಸಿದೆ.
ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರಾಲಿ ವೇಳೆ ನಡೆದ ಹಿಂಸಾಚಾರದ ಬಗ್ಗೆ ಸರ್ಕಾರ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆಯನ್ನು ಕೇಳಿದ್ದು, ಆ ಪ್ರಕಾರ ಕಾನೂನು ತನ್ನದೇ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದರು. ಆ ನಿಟ್ಟಿನಲ್ಲಿ ನಾವು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ನೀವು (ಅರ್ಜಿದಾರರು) ಸರ್ಕಾರವನ್ನು ಸಂಪರ್ಕಿಸಬಹುದಾಗಿದೆ ಎಂದು ಸಿಜೆಐ ತಿಳಿಸಿದ್ದಾರೆ.
ಜನವರಿ 26ರಂದು ನಡೆದ ಘಟನೆ ದುರದೃಷ್ಟಕರ, ಎರಡು ಕಡೆಯಿಂದಲೂ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ. ಆದರೆ ಇದರಿಂದ ಜನರು ತೊಂದರೆಗೀಡಾಗಿದ್ದರು ಎಂದು ಅರ್ಜಿದಾರರಾದ ವಕೀಲ ವಿಶಾಲ್ ತಿವಾರಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.