ನವದೆಹಲಿ: ರಾಜಕೀಯ ಪಕ್ಷಗಳು ಮತದಾರರಿಗೆ ನೀಡುವ ಉಚಿತ ಕೊಡುಗೆಗಳನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ ಶುಕ್ರವಾರ (ಆಗಸ್ಟ್ 26)ಮತ್ತೊಂದು ತ್ರಿಸದಸ್ಯ ಪೀಠಕ್ಕೆ ಶಿಫಾರಸ್ಸು ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ : ಮೂರು ಮಕ್ಕಳು ಸೇರಿ ಐದು ಮಂದಿ ಸಾವು
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಸಿಜೆಐ ನೇತೃದ ಪೀಠ, ಪ್ರಜಾಪ್ರಭುತ್ವದಲ್ಲಿನ ಚುನಾವಣೆಯಲ್ಲಿ ನಿಜವಾದ ಶಕ್ತಿ ಇರುವುದು ಮತದಾರರಲ್ಲಿ ಮತ್ತು ಚುನಾವಣೆಯಲ್ಲಿ ಮತದಾರರು ಪಕ್ಷ ಹಾಗೂ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರ್ಣಾಯಕರು ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದೆ.
ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠ ಬುಧವಾರದ ವಿಚಾರಣೆಯ ವೇಳೆ, ಏಕೆ ಭಾರತ ಸರ್ಕಾರ ಈ ಬಗ್ಗೆ ಅಧ್ಯಯನಕ್ಕೆ ಒಂದು ಸಮಿತಿ ರಚಿಸಬಾರದು? ಸರ್ವಪಕ್ಷ ಸಭೆಯನ್ನೂ ಕರೆಯಬಹುದು ಎಂದು ಕೇಂದ್ರದ ಪ್ರತಿನಿಧಿಯಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸಲಹೆ ನೀಡಿತ್ತು.
ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಉಚಿತ ಕೊಡುಗೆ ಕುರಿತು ನ್ಯಾಯಾಂಗದ ಪರಿಶೀಲನೆಯ ವ್ಯಾಪ್ತಿಯನ್ನು ಒಳಗೊಂಡಂತೆ ಈ ಸಮಸ್ಯೆಗೆ ದೀರ್ಘವಾದ ವಿಚಾರಣೆ ನಡೆಸುವ ಅಗತ್ಯವಿದೆ ಎಂದಿರುವ ಸಿಜೆಐ ನೇತೃತ್ವದ ಪೀಠ, ಈ ಅರ್ಜಿಯ ವಿಚಾರಣೆಯನ್ನು ಮತ್ತೊಂದು ತ್ರಿಸದಸ್ಯ ಪೀಠಕ್ಕೆ ಶಿಫಾರಸ್ಸು ಮಾಡಿದೆ ಎಂದು ವರದಿ ಹೇಳಿದೆ.