ನವದೆಹಲಿ: ಕಳೆದ ವರ್ಷ ಪಂಜಾಬ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಾದ ಭದ್ರತಾ ವೈಫಲ್ಯಕ್ಕೆ ಫಿರೋಜ್ ಪುರ್ ಹಿರಿಯ ಪೊಲೀಸ್ ಅಧಿಕಾರಿಯೇ ಹೊಣೆ ಎಂದು ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಸಮಿತಿ ವರದಿ ನೀಡಿದೆ.
ಇದನ್ನೂ ಓದಿ:ಕೆಂಪಣ್ಣ ಒಂದು ವರ್ಷದಿಂದ ಆರೋಪ ಮಾಡುತ್ತಾ ಇದ್ದಾರೆ: ಸಿಎಂ ಬೊಮ್ಮಾಯಿ
ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ಭೇಟಿ ವೇಳೆಯಲ್ಲಿ ನಡೆದ ಭದ್ರತಾ ವೈಫಲ್ಯದ ಕಾರಣ ಪತ್ತೆ ಹಚ್ಚಲು ಸುಪ್ರೀಂಕೋರ್ಟ್ ಮಾಜಿ ಜಸ್ಟೀಸ್ ಇಂದು ಮಲ್ಹೋತ್ರಾ ನೇತೃತ್ವದ ಸಮಿತಿಯನ್ನು ಸುಪ್ರೀಂ ಪೀಠ ನೇಮಕ ಮಾಡಿತ್ತು.
ಸಮಿತಿ ಗುರುವಾರ (ಆಗಸ್ಟ್ 25) ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ, ಪ್ರಧಾನಿ ಅವರ ಬೆಂಗಾವಲು ಪಡೆ ಕಾರು ತೆರಳುತ್ತಿದ್ದಾಗ ನಡೆದ ಭದ್ರತಾ ವೈಫಲ್ಯಕ್ಕೆ ಫಿರೋಜ್ ಪುರ್ ಎಸ್ ಎಸ್ ಪಿಯೇ ಹೊಣೆ. ಎಸ್ ಎಸ್ ಪಿ ಅಂದು ಅಗತ್ಯವಿರುವಷ್ಟು ಪೊಲೀಸ್ ಪಡೆಯನ್ನು ನಿಯೋಜಿಸುವಲ್ಲಿ ವಿಫಲರಾಗಿದ್ದರು ಎಂದು ತಿಳಿಸಿದೆ.
ಭದ್ರತಾ ವೈಫಲ್ಯದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಐವರು ಸದಸ್ಯರ ಸಮಿತಿಯು ನೀಡಿರುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪ್ರಧಾನಿ ಪಂಜಾಬ್ ಭೇಟಿ ವೇಳೆ ಫಿರೋಜ್ ಪುರ್ ಹಿರಿಯ ಪೊಲೀಸ್ ಅಧಿಕಾರಿ ಭದ್ರತೆಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳದಿರುವುದು ಲೋಪವಾಗಿರುವುದು ಸಮಿತಿಯ ತನಿಖೆಯ ವೇಳೆ ತಿಳಿದು ಬಂದಿರುವುದಾಗಿ ಜಸ್ಟೀಸ್ ಇಂದು ಮಲ್ಹೋತ್ರಾ ನೇತೃತ್ವದ ಸಮಿತಿ ಸುಪ್ರೀಂಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.