Advertisement

ಜಹಾಂಗೀರ್‌ಪುರಿ: ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ ಸುಪ್ರೀಂ ತಡೆ

04:19 PM Apr 20, 2022 | Vishnudas Patil |

ನವದೆಹಲಿ: ಶನಿವಾರ ಸಂಜೆ ಹನುಮ ಜಯಂತಿ ಮೆರವಣಿಗೆ ವೇಳೆ ಕೋಮು ಘರ್ಷಣೆ ನಡೆದಿದ್ದ ಜಹಾಂಗೀರ್‌ಪುರಿ ಯಲ್ಲಿ ಬುಧವಾರ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿದ್ದ ನೆಲಸಮ ಕಾರ್ಯಾಚರಣೆಯನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿ, “ಯಥಾಸ್ಥಿತಿ” ಕಾಪಾಡಲು ಆದೇಶ ಮಾಡಿದೆ.

Advertisement

ಹಿಂಸಾಚಾರ ಪೀಡಿತ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ನಾಗರಿಕ ಸಂಸ್ಥೆ ನಡೆಸುತ್ತಿರುವ ಧ್ವಂಸ ಕಾರ್ಯಾಚರಣೆಯ ಕುರಿತು ಸುಪ್ರೀಂ ಕೋರ್ಟ್ ಯಥಾಸ್ಥಿತಿಗೆ ಆದೇಶ ನೀಡಿದ ನಂತರ ನಾವು ಎಸ್‌ಸಿ ಆದೇಶವನ್ನು ಅನುಸರಿಸುತ್ತೇವೆ ಮತ್ತು ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಹೇಳಿದ್ದಾರೆ.

ಜಹಾಂಗೀರ್‌ಪುರಿಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸಲಾಗುತ್ತಿದ್ದು, ಜನರು ಅತಿಕ್ರಮಣ ಮಾಡುತ್ತಾರೆ ಮತ್ತು ‘ಗೂಂಡಾಗಿರಿ’ ಮಾಡುತ್ತಾರೆ. ಅವರಲ್ಲಿ ಕೆಲವರ ಹೆಸರೂ ಗಲಭೆಯಲ್ಲಿದೆ. ಅನಧಿಕೃತ ನಿರ್ಮಾಣದ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಿವಿಲ್ ಲೈನ್ಸ್ ವಾಯುವ್ಯ ಜಿಲ್ಲೆಯ ವಲಯ ಅಧ್ಯಕ್ಷ ನವೀನ್ ತ್ಯಾಗಿ ಹೇಳಿಕೆ ನೀಡಿದ್ದರು.

ಹಿಂಸಾಚಾರ ಪೀಡಿತ ಜಹಾಂಗೀರ್‌ ಪುರಿಯಲ್ಲಿ ಧ್ವಂಸ ಕಾರ್ಯಾಚರಣೆಗೆ ಕನಿಷ್ಠ 400 ಸಿಬ್ಬಂದಿಯನ್ನು ಒದಗಿಸುವಂತೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಪೊಲೀಸರಿಗೆ ಪತ್ರ ಬರೆದಿತ್ತು. ಈ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಜೆಪಿ ಮತ್ತು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬುಲ್ಡೋಜರ್‌ನಿಂದ ಅಕ್ರಮ ಕಟ್ಟಡಗಳ ಕೆಡವಲು ಮುಂದಾದ ಬಗ್ಗೆ “ನಮಗೆ ಯಾವುದೇ ನೋಟಿಸ್ ನೀಡಿಲ್ಲ, ನನ್ನ ಪತಿ ಮತ್ತು ನಾನು ಎರಡು ದಶಕಗಳಿಂದ ಇಲ್ಲಿ ಗಾಡಿ ವ್ಯಾಪಾರ ನಡೆಸುತ್ತಿದ್ದೇವೆ. ಯೇ ಸಬ್ ಬದ್ಲೇ ಕೆ ಭಾವ್ ಸೇ ಹೋ ರಹಾ ಹೈ” ಎಂದು ಜಮೀಲಾ ಎನ್ನುವವರು ಹೇಳಿಕೆ ನೀಡಿದ್ದಾರೆ.

Advertisement

ಕಳೆದ 15 ವರ್ಷಗಳಿಂದ ನನ್ನ ಅಂಗಡಿ ಇಲ್ಲೇ ಇತ್ತು. ಅಕ್ರಮದ ಬಗ್ಗೆ ಮೊದಲು ಯಾರೂ ಚಕಾರ ಎತ್ತಲಿಲ್ಲ, ಈಗ ಎರಡು ಕೋಮುಗಳ ನಡುವೆ ಹಿಂಸಾಚಾರದ ಘಟನೆಯ ನಂತರ ಇದು ನಡೆಯುತ್ತಿದೆ ಎಂದು ಜಹಾಂಗೀರ್‌ಪುರಿ ಸ್ಥಳೀಯರೊಬ್ಬರು ಹೇಳಿದ್ದಾರೆ.

ಹಿಂಸಾಚಾರ ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇದುವರೆಗೆ 25 ವಯಸ್ಕರು ಮತ್ತು ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಏತನ್ಮಧ್ಯೆ, ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಜಹಾಂಗೀರ್‌ಪುರಿಯಲ್ಲಿ ಗಲಭೆ ನಡೆಸಿದ ಆರೋಪ ಹೊತ್ತಿರುವವರು ಆ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಮತ್ತು ಅವುಗಳನ್ನು ನೆಲಸಮಗೊಳಿಸಬೇಕೆಂದು ಒತ್ತಾಯಿಸಿದ್ದರು. ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಬುಧವಾರ ಮತ್ತು ಗುರುವಾರ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವನ್ನು ಘೋಷಿಸಿತ್ತು.

ಜಹಾಂಗೀರ್‌ಪುರಿಯಲ್ಲಿ ಕೆಡವುವುದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಜಹಾಂಗೀರಪುರಿ ಪ್ರದೇಶದಲ್ಲಿ ಸಂಪೂರ್ಣ ಅನಧಿಕೃತ ಅಸಾಂವಿಧಾನಿಕ ಧ್ವಂಸಕ್ಕೆ ಆದೇಶ ನೀಡಲಾಗಿದೆ ಎಂದು ಹಿರಿಯ ವಕೀಲ ದುಷ್ಯಂತ್ ದವೆ ಹೇಳಿದ್ದಾರೆ. ಜಮಿಯತ್ ಉಲೇಮಾ-ಎ-ಹಿಂದ್ ಬುಧವಾರ ತುರ್ತು ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next