ನವದೆಹಲಿ: ಸಾಮೂಹಿಕ ಮತಾಂತರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಪಿಐಎಲ್‌ನಲ್ಲಿ ಇರುವ ನಿಂದಾನಾತ್ಮಕ ಆರೋಪಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ಆರ್.ಶಾ ಮತ್ತು ನ್ಯಾ. ಎಸ್.ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ, ದಾಖಲೆಗಳಲ್ಲಿ ಈ ರೀತಿಯ ಟೀಕೆಗಳು ಬರದಂತೆ ಖಚಿತಪಡಿಸಿಕೊಳ್ಳುವಂತೆ ಹಿರಿಯ ನ್ಯಾಯವಾದಿ ಅರವಿಂದ್ ಪಿ. ದಾತರ್ ಅವರಿಗೆ ಸೂಚಿಸಿತು. ಬಳಿಕ ಪ್ರಕರಣವನ್ನು ಜ.9ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಕೆಲವು ಕ್ರಿಶ್ಚಿಯನ್ ಸಂಘಟನೆಗಳ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ದುಶ್ಯಂತ್ ದವೆ, “ಕೆಲವು ಧರ್ಮಗಳು ಅತ್ಯಾಚಾರ ಮತ್ತು ಹತ್ಯೆಗಳಲ್ಲಿ ತೊಡಗಿವೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದರೆ ಈ ರೀತಿಯ ಆರೋಪಗಳನ್ನು ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ ಎಂದು ಅಲ್ಪಸಂಖ್ಯಾತ ಸಮುದಾಯಗಳಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಹಾಗಾಗಿ ನಿಂದಾನಾತ್ಮಕ ಆರೋಪಗಳನ್ನು ದಾಖಲೆಗಳಿಂದ ತೆಗೆದುಹಾಕಬೇಕು,’ ಎಂದು ಕೋರಿದ್ದರು.
ಕಠಿಣ ಕಾನೂನು ಅಗತ್ಯ
“ಧಾರ್ಮಿಕ ಮತಾಂತರದ ಬಲೆಯಿಂದ ರಕ್ಷಿಸಲು ಕಠಿಣ ಕಾನೂನು ಜಾರಿಯಾಗುವ ಅಗತ್ಯವಿದೆ,’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಪಾದಿಸಿದರು.
“ಬಲೆ ಬೀಸಿ ಧಾರ್ಮಿಕ ಮತಾಂತರಗೊಳಿಸಿ ಮದುವೆಯಾಗಿ ಅಥವಾ ಅಕ್ರಮವಾಗಿ ಪಡೆದ ಭೂಮಿಯನ್ನು ನಿಜವಾದ ಮಾಲೀಕರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಗ್ರಾಮ ಸಭೆಗೆ ಅಧಿಕಾರ ನೀಡಬೇಕು,’ ಎಂದು ಅವರು ಆಗ್ರಹಿಸಿದರು.