Advertisement

Ram Mandir ಲೋಕಾರ್ಪಣೆ ಪ್ರಸಾರಕ್ಕೆ ತಡೆ: ತಮಿಳುನಾಡು ಸರಕಾರಕ್ಕೆ ಸುಪ್ರೀಂ ತರಾಟೆ

12:05 AM Jan 23, 2024 | Team Udayavani |

ಹೊಸದಿಲ್ಲಿ/ಚೆನ್ನೈ: ತಮಿಳು ನಾಡಿನ ದೇಗುಲಗಳಲ್ಲಿ ಅಯೋಧ್ಯೆಯಲ್ಲಿನ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ನೇರ ಪ್ರಸಾರಕ್ಕೆ ಅನುಮತಿ ನೀಡದೇ ಇದ್ದುದಕ್ಕೆ ಸುಪ್ರೀಂ ಕೋರ್ಟ್‌ ತಮಿಳುನಾಡು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

Advertisement

ದೇಗುಲಗಳಲ್ಲಿ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಜತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಂತೆ ಪೊಲೀಸ್‌ ಇಲಾಖೆ ನೀಡಿದ್ದ ಮೌಖಿಕ ಆದೇಶವೂ ಸರಿಯಲ್ಲ. ಇದೊಂದು ಕ್ರೂರ ಕ್ರಮ ಎಂದು ನ್ಯಾ| ಸಂಜೀವ್‌ ಖನ್ನಾ ಮತ್ತು ನ್ಯಾ|ದೀಪಂಕರ್‌ ದತ್ತಾ ನೇತೃತ್ವದ ನ್ಯಾಯಪೀಠ ಟೀಕಿಸಿದೆ.

ಜ.20ರಂದು ತಮಿಳುನಾಡು ಪೊಲೀಸ್‌ ಇಲಾಖೆ ಮೌಖಿಕ ವಾಗಿ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್‌ ವಿಚಾರಣೆ ನಡೆಸಿದ ನ್ಯಾಯ ಪೀಠ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮೌಖಿಕ ಆದೇಶದ ಬದಲು ಲಿಖೀತ ಆದೇಶ ನೀಡಬೇಕು. ಪೊಲೀಸ್‌ ಇಲಾಖೆ ನೀಡುವ ಮೌಖಿಕ ಆದೇಶಕ್ಕೆ ಬೆಲೆ ಇಲ್ಲ ಎಂದು ಸ್ಪಷ್ಟಪಡಿಸಿತು.

ಪೊಲೀಸ್‌ ಇಲಾಖೆ ಕಾನೂನಿನ ಅನ್ವಯ ಕೆಲಸ ಮಾಡುತ್ತದೆ ಎನ್ನುವುದು ನಮ್ಮ ನಂಬಿಕೆ. ಅದು ಮೌಖಿಕ ಆದೇಶದ ಅನ್ವಯ ವರ್ತಿಸಬಾರದು. ಮಂದಿರ ಲೋಕಾರ್ಪಣೆ ಕಾರ್ಯಕ್ರಮ ನೇರ ಪ್ರಸಾರ ಸೇರಿದಂತೆ ಯಾವುದೇ ಕಾರ್ಯಕ್ರಮ ಆಯೋಜನೆ ಕೋರಿ ಸಲ್ಲಿಸಿದ ಅರ್ಜಿಯನ್ನು ಪೊಲೀಸರು ಪರಿಶೀಲಿಸಿ, ಪುರಸ್ಕರಿಸುವ ಅಥವಾ ತಿರಸ್ಕರಿಸುವ ಬಗ್ಗೆ ಲಿಖಿತವಾಗಿ ಕಾರಣ ನೀಡಬೇಕು ಎಂದು ನ್ಯಾಯಪೀಠ ಹೇಳಿತು.ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ನಿರ್ಮಲಾ ಸೀತಾರಾಮನ್‌ ಮತ್ತು ತಮಿಳುನಾಡು ಸಚಿವ ಶೇಖರ್‌ ಬಾಬು ನಡುವೆ ವಾಗ್ವಾದವೂ ಉಂಟಾಗಿತ್ತು.

ಖಾಸಗಿ ಸ್ಥಳದಲ್ಲಿ ಭಜನೆಗೆ
ಅನುಮತಿ ಬೇಕಿಲ್ಲ: ಕೋರ್ಟ್‌
ಇನ್ನೊಂದೆಡೆ, ಖಾಸಗಿ ಸ್ಥಳಗಳಲ್ಲಿ ಅನ್ನದಾನ, ಭಜನೆ ಮತ್ತು ಇತರ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ತಮಿಳುನಾಡು ಪೊಲೀ ಸರು ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ನ್ಯಾ.ಜೆ.ಆನಂದ್‌ ವೆಂಕಟೇಶ್‌ ನೇತೃತ್ವದ ಏಕಸದಸ್ಯ ನ್ಯಾಯಪೀಠಕ್ಕೆ ಅರಿಕೆಯನ್ನೂ ಮಾಡಿಕೊಂಡಿದ್ದಾರೆ. ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಚೆನ್ನೈನಲ್ಲಿ ಭಜನೆ ಕಾರ್ಯಕ್ರಮ ಆಯೋಜನೆ ಮಾಡಲು ಎಲ್‌.ಗಣಪತಿ ಎಂಬುವರು ಚೆನ್ನೈನ ಸಹಾಯ ಪೊಲೀಸ್‌ ಆಯುಕ್ತರಿಗೆ ಅನುಮತಿ ಕೋರಿ ಮನವಿ ಮಾಡಿದ್ದರು. ಅವರು ಅದಕ್ಕೆ ಅನುಮತಿ ನಿರಾಕರಿಸಿದ್ದರು. ಅದನ್ನು ಮದ್ರಾಸ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಪೀಠ ಪೊಲೀಸರ ಮತ್ತು ಸರ್ಕಾರದ ನಿಲುವು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಪೊಲೀಸ್‌ ಇಲಾಖೆ ಸರ್ಕಾರಿ ಸ್ವಾಮ್ಯದ ದೇಗುಲಗಳಲ್ಲಿ ಭಜನೆ, ಅನ್ನದಾನದಂಥ ಕಾರ್ಯಕ್ರಮಗಳ ಆಯೋಜನೆ ಮಾಡುವುದಿದ್ದರೆ, ದೇಗುಲಗಳ ಆಡಳಿತ ಮಂಡಳಿಗಳ ಮೂಲಕ ಪೂರ್ವಾನುಮತಿ ಪಡೆಯ ಬೇಕಾ ಗುತ್ತದೆ. ಕಾರ್ಯಕ್ರಮದ ರೂಪು ರೇಷೆಯ ಅನ್ವಯ ಅನುಮತಿ ನೀಡಲಾಗುತ್ತದೆ ಎಂದು ಪೊಲೀಸ್‌ ಇಲಾಖೆ ಲಿಖೀತ ಉತ್ತರದಲ್ಲಿ ತಿಳಿಸಿತು. ಅದಕ್ಕೆ ಉತ್ತರಿಸಿದ ನ್ಯಾ.ಆನಂದ್‌ ವೆಂಕಟೇಶ್‌, “ರಾಜ್ಯ ಸರ್ಕಾರದ ನಿಯಮಗಳು ಸ್ಪಷ್ಟವಾಗಿವೆ. ಆದರೆ, ರಾಮನಾಮ ಸ್ಮರಣೆ, ಅನ್ನದಾನದಂಥ ಕಾರ್ಯಕ್ರಮಗಳು ನಿಷೇಧಕ್ಕೆ ಒಳಪಟ್ಟ ಕಾರ್ಯಕ್ರಮಗಳಲ್ಲ. ಅಂಥ ಕಾರ್ಯಕ್ರಮಗಳ ಆಯೋಜಕರು ಹೊಣೆ ಅರಿತು, ಶಾಂತಿಯುತವಾಗಿ ನಡೆಸಿಕೊಡ ಬೇಕು’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next