ಹೊಸದಿಲ್ಲಿ: ಭ್ರಷ್ಟಾಚಾರ ತಡೆ ಕಾಯ್ದೆಯಡಿ ತಮ್ಮ ಮತ್ತು ಇತರರ ವಿರುದ್ಧ ದಾಖಲಾಗಿದ್ದ ಲಂಚದ ದೂರಿನ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪೊಲೀಸ್ ತನಿಖೆಗೆ ತಡೆ ನೀಡುವಂತೆ ಅವರು ಸಲ್ಲಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ‘ತನಿಖೆಗೆ ಮಧ್ಯಂತರ ತಡೆ’ ನೀಡಿದೆ.
ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಅಧಿಕಾರಿಗಳು, ಗುತ್ತಿಗೆದಾರರನ್ನು ಆರೋಪಿಗಳನ್ನಾಗಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶ ನೀಡಿತ್ತು.
ಬಹುಮಹಡಿ ವಸತಿ ಯೋಜನೆಯ ಗುತ್ತಿಗೆ ಮುಂದುವರಿಸಲು 29 ಕೋಟಿ ರೂ. ಲಂಚವನ್ನು ಯಡಿಯೂರಪ್ಪ ಹಾಗೂ ಕುಟುಂಬ ವರ್ಗ ಪಡೆದಿದೆ. ವಿಜಯೇಂದ್ರ ಹಾಗೂ ಶಶಿಧರ ಮರಡಿ ಒಡೆತನಕ್ಕೆ ಸೇರಿದ ಬೆಲ್ ಗ್ರಾವಿಯಾ ಹಾಗೂ ಎಸ್ವಿಎಸ್ ಸಂಸ್ಥೆಗಳಿಗೆ ಬಂಗಾಲದ ಶೆಲ್ ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಅಬ್ರಾಹಂ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಇದನ್ನೂ ಓದಿ:ವೋಟರ್ ಐಡಿಗೆ ಆಧಾರ್ ಜೋಡಣೆ; ಅತ್ಯುತ್ತಮ ಕಾರ್ಯ ಮಾಡಿದ ಶಿಕ್ಷಕ, ಆಶಾಕಾರ್ಯಕರ್ತೆಗೆ ಅಭಿನಂದನೆ
ಹೈಕೋರ್ಟ್ ವಿಚಾರಣೆಗೆ ಅಸ್ತು ಹೇಳಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ರದ್ದುಪಡಿಸುವಂತೆ ಅವರು ಮನವಿ ಮಾಡಿದ್ದರು. ಇದೀಗ ಬಿಎಸ್ ವೈ ಮನವಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರಿಗೆ ಸಂಬಂಧಿಸಿದಂತೆ ಮುಂದಿನ ಪ್ರಕ್ರಿಯೆಗಳನ್ನು ತಡೆಹಿಡಿಯಲು ನ್ಯಾ. ಡಿ.ವೈ ಚಂದ್ರಚೂಡರಿದ್ದ ಪೀಠ ಈ ಆದೇಶ ಹೊರಡಿಸಿದೆ.