ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ‘ಸ್ವಯಂ ಇಚ್ಛೆಯಿಂದ ಬ್ರಿಟನ್ ಪೌರತ್ವವನ್ನು’ ಪಡೆದುಕೊಂಡಿರುವ ಕಾರಣ ಅವರು ಲೋಕಸಭೆಗೆ ಸ್ಪರ್ಧಿಸದಂತೆ ತಡೆಯಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲವು ತಿರಸ್ಕರಿಸಿದೆ.
ರಾಹುಲ್ ಗಾಂಧಿ ಅವರು ಈಗಲೂ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ ಎಂಬುದನ್ನು ಬ್ರಿಟಿಷ್ ಕಂಪೆನಿಯ ದಾಖಲೆಯೊಂದು ತೋರಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ಸುಬ್ರಹ್ಮಣ್ಯ ಸ್ವಾಮಿ ಅವರು ಇತ್ತೀಚೆಗೆ ಆರೋಪಿಸಿದ್ದರು. ಸ್ವಾಮಿ ಅವರ ಈ ಆರೋಪವನ್ನು ಆಧಾರವಾಗಿರಿಸಿಕೊಂಡು ದೆಹಲಿಯ ಇಬ್ಬರು ನಿವಾಸಿಗಳು ಸುಪ್ರೀಂ ಕೋರ್ಟಿನಲ್ಲಿ ಈ ಸಂಬಂಧ ದೂರು ಅರ್ಜಿಯೊಂದನ್ನು ಸಲ್ಲಿಸಿದ್ದರು.
ರಾಹುಲ್ ಅವರ ದ್ವಿ ಪೌರತ್ವ ದೂರಿಗೆ ಸಂಬಂಧಿಸಿದಂತೆ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಕೇಂದ್ರ ಗೃಹ ಸಚಿವಾಲಯಕ್ಕೂ ನಿರ್ದೇಶನ ನೀಡುವಂತೆ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ಆದರೆ ಇದಕ್ಕೆ ಪ್ರತಿಯಾಗಿ ಯಾವ ದಾಖಲೆಗಳ ಆಧಾರದಲ್ಲಿ ನೀವು ಈ ವಿಷಯವನ್ನು ಹಿಡಿದುಕೊಂಡು ಇಲ್ಲಿಯವರೆಗೆ ಬಂದಿದ್ದೀರಿ ಎಂದು ನ್ಯಾಯಪೀಠ ಅರ್ಜಿದಾರರನ್ನು ಪ್ರಶ್ನಿಸಿತು. ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ ಎಂಬ ಪತ್ರಿಕಾ ತುಣುಕುಗಳನ್ನು ನೀವು ಹಿಡಿದುಕೊಂಡು ಬಂದ ತಕ್ಷಣ ಅವರು ಬ್ರಿಟಿಷ್ ಪ್ರಜೆ ಆಗಿಬಿಡುತ್ತಾರಾ? ಈ ದೂರು ಅರ್ಜಿಯಲ್ಲಿ ಯಾವುದೇ ಪುರಾವೆ ಇಲ್ಲ ಹಾಗಾಗಿ ಈ ಅರ್ಜಿಯನ್ನು ನ್ಯಾಯಪೀಠವು ತಿರಸ್ಕರಿಸುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದರು.
ರಾಹುಲ್ ಗಾಂಧಿ ಅವರು ಈ ದೇಶದ ಪ್ರಧಾನಮಂತ್ರಿ ಆಗಬೇಕೆಂದಿದ್ದಾರೆ. ಆದರೆ ಅವರು ದ್ವಿ ಪೌರತ್ವವನ್ನು ಹೊಂದಿರುವುದರಿಂದ ಅವರು ಈ ದೇಶದ ಪ್ರಧಾನ ಮಂತ್ರಿ ಪದಕ್ಕೆ ಅರ್ಹರಲ್ಲ ಎಂದು ಅರ್ಜಿದಾರರು ತಮ್ಮ ವಾದದಲ್ಲಿ ಉಲ್ಲೇಖಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಯವರು,
‘ಯಾರು ತಾನೇ ಪ್ರಧಾನ ಮಂತ್ರಿ ಆಗಬೇಕೆಂದು ಬಯಸುವುದಿಲ್ಲ? 130 ಕೋಟಿ ಜನರಲ್ಲಿ ಎಲ್ಲರಲ್ಲೂ ಪ್ರಧಾನಿ ಆಗಬೇಕೆಂಬ ಆಸೆ ಇರುತ್ತದೆ, ಇದು ಆರೋಗ್ಯಕರ ಆಸೆ ಅಲ್ಲವೇ?’ ಎಂದು ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದರು.