ನವದೆಹಲಿ: ಜಾಗತಿಕವಾಗಿ ಹರಡುತ್ತಿರುವ
ಕೊರೊನಾ ವೈರಸ್ (ಕೋವಿಡ್-19) ಹಿನ್ನೆಲೆಯಲ್ಲಿ ಮಾರ್ಚ್ 16ರಿಂದ ತುರ್ತು ಅರ್ಜಿಯನ್ನಷ್ಟೇ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದ್ದು, ವಕೀಲರನ್ನು ಹೊರತುಪಡಿಸಿ ಬೇರೆ ಯಾವ ವ್ಯಕ್ತಿಯನ್ನು ನ್ಯಾಯಾಲಯದೊಳಕ್ಕೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ,
ಸುಪ್ರೀಂಕೋರ್ಟ್ ನಲ್ಲಿ ಪ್ರತಿದಿನ 14 ಪೀಠಗಳು ಕಾರ್ಯಾಚರಿಸುತ್ತಿದ್ದು, ಮಾರ್ಚ್ 16ರಿಂದ ಸುಪ್ರೀಂಕೋರ್ಟ್ ನ ಕೇವಲ ಆರು ಪೀಠಗಳಲ್ಲಿ ಮಾತ್ರ ತುರ್ತು ಅರ್ಜಿ ವಿಚಾರಣೆ ನಡೆಯಲಿದೆ ಎಂದು ಹೇಳಿದೆ.
ಕೋವಿಡ್ -19 ಜಾಗತಿಕ ಸೋಂಕು ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ನಂತರ ಕೇಂದ್ರ ಸರ್ಕಾರ ಮಾರ್ಚ್ 5ರಂದು ಪ್ರಕಟಿಸಿರುವ ಮುಂಜಾಗ್ರತಾ ಕ್ರಮದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಮಾರ್ಚ್ 12 ಮತ್ತು 13ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಅವರ ನಿವಾಸದಲ್ಲಿ ಸಭೆ ನಡೆಸಿ ಕೋರ್ಟ್ ಕಲಾಪ ನಡೆಸುವ ಕುರಿತು ಚರ್ಚೆ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ.
ಸೋಮವಾರದಿಂದ ತುರ್ತು ಅರ್ಜಿಯನ್ನಷ್ಟೇ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಪ್ರಧಾನ ಕಾರ್ಯದರ್ಶಿ ಸಂಜೀವ್ ಎಸ್ ಕಲ್ಗಾಂವ್ ಕರ್ ಬಿಡುಗಡೆ ಮಾಡಿರುವ ನೋಟಿಸ್ ನಲ್ಲಿ ತಿಳಿಸಿದ್ದಾರೆ. ಕೋರ್ಟ್ ಗೆ ಆಗಮಿಸುವ ಎಲ್ಲಾ ಕಕ್ಷಿದಾರರ, ವೀಕ್ಷಕರ, ವಕೀಲರು, ಕೋರ್ಟ್ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು, ತರಬೇತಿಯ ವಿದ್ಯಾರ್ಥಿಗಳು, ಮಾಧ್ಯಮ ಪ್ರತಿನಿಧಿಗಳ ರಕ್ಷಣೆ ಮತ್ತು ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರ ಮತ್ತು ತಜ್ಞ ವೈದ್ಯರ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಹೈಕೋರ್ಟ್ ಕೂಡಾ ಜಿಲ್ಲಾ ನ್ಯಾಯಾಲಯಕ್ಕೆ ಸಲಹಾ ನೋಟಿಸ್ ನೀಡಿದ್ದು, ಕಕ್ಷಿದಾರರ, ವಕೀಲರ, ಸಿಬ್ಬಂದಿಗಳ ಹಿತದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡದ ರೀತಿಯಲ್ಲಿ ಕೋರ್ಟ್ ಕಲಾಪ ನಡೆಸಬೇಕು. ಆದಷ್ಟು ವಿಡಿಯೋ ಕಾನ್ಫರೆನ್ಸ್ ಗಳ ಮೂಲಕ ಪುರಾವೆ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಸೂಚಿಸಿದೆ.