ಹೊಸದಿಲ್ಲಿ: ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿನ ಕಳೆಗಳನ್ನು ಸುಡುವ ಪ್ರಕ್ರಿಯೆಗೆ ಕಡಿವಾಣ ಹಾಕುವ ಮೂಲಕ ದಿಲ್ಲಿಯಲ್ಲಿ ಉಂಟಾಗುತ್ತಿರುವ ಅಗಾಧ ವಾಯು ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕುರ್ ನೇತೃತ್ವದ ಏಕಸದಸ್ಯ
ಪೀಠವನ್ನು ರಚಿಸಿದೆ.
ಇದೇ ವೇಳೆ, ಏಕಸದಸ್ಯ ಸಮಿತಿ ರಚಿಸಿರುವುದನ್ನು ಮರುಪರಿಶೀಲಿಸುವಂತೆ ಕೇಂದ್ರ ಸರಕಾರ ಮಾಡಿದ ಮನವಿಯನ್ನೂ ನ್ಯಾಯಪೀಠ ತಳ್ಳಿಹಾಕಿದ್ದು, ದಿಲ್ಲಿ – ಎನ್‌ಸಿಆರ್ ಪ್ರದೇಶದ ಜನರು ಶುಭ್ರ ಗಾಳಿಯನ್ನು ಉಸಿರಾಡುವಂತೆ ಮಾಡುವುದೇ ನಮ್ಮ ಆದ್ಯತೆ ಎಂದು ಸ್ಪಷ್ಟಪಡಿಸಿದೆ. ಈ ಕುರಿತ ಮುಂದಿನ ವಿಚಾರಣೆಯನ್ನು ಅ.26ಕ್ಕೆ ನಿಗದಿಪಡಿಸಿದೆ.
ಕಳೆಗಳನ್ನು ಸುಟ್ಟು ಹಾಕುವಂಥ ಹೊಲಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಯನ್ನು ಪರಿಶೀಲಿಸಲು ನ್ಯಾ| ಲೋಕುರ್ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ನ್ಯಾಯಾಲಯ ನೇಮಕ ಮಾಡಿರುವ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಮತ್ತು ಹರಿಯಾಣ, ಪಂಜಾಬ್, ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಸೂಚಿಸಿದೆ.
ಅಲ್ಲದೆ, ಸಮಿತಿಗೆ ಸಹಾಯ ಮಾಡಲು ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಭಾರತ್ ಸ್ಕೌಟ್ಸ್ ಸದಸ್ಯರನ್ನೂ ನಿಯೋಜಿಸಬೇಕು. ಆಯಾ ರಾಜ್ಯ ಸರಕಾರಗಳೇ ಸಮಿತಿಗೆ ಭದ್ರತಾ, ಹಣಕಾಸು ಸೌಲಭ್ಯ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಕಲ್ಪಿಸಬೇಕು ಎಂದೂ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ಪೀಠ
ನಿರ್ದೇಶಿಸಿದೆ.
ಈ ನಡುವೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಸೆಪ್ಟಂಬರ್ ನಿಂದೀಚೆಗೆ ದಿಲ್ಲಿಯ ಹವಾಗುಣ ಸಮರ್ಪಕವಾಗಿಲ್ಲ. ಮಲಿನಕಾರಕಗಳನ್ನು ಸಾಗಾಟ ಮಾಡುವಂಥ ಪರಿಸ್ಥಿತಿ ಇಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಶುಕ್ರವಾರ ಹೇಳಿದೆ.