Advertisement

ಜನಗಣತಿಯ ಪೂರ್ವ ಸಮೀಕ್ಷೆಗೆ ಸಹಕರಿಸಿ

09:55 PM Sep 08, 2019 | Team Udayavani |

ಚಾಮರಾಜನಗರ: ಸಾರ್ವಜನಿಕರು ಜನಗಣತಿಯ ಮಹತ್ವವನ್ನು ಅರಿತುಕೊಂಡು ಜಿಲ್ಲೆಯಲ್ಲಿ ಕೈಗೊಂಡಿರುವ ಪೂರ್ವ ಸಮೀಕ್ಷಾ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಸಹಕರಿಸಿ, ಇದನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ಮನವಿ ಮಾಡಿದರು.

Advertisement

ನಗರದ ಜಿಲ್ಲಾಡಳಿತದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ನಡೆದ 2021ನೇ ಸಾಲಿನ ಜನಗಣತಿಯ ಪೂರ್ವ ಸಮೀಕ್ಷಾ ಉದ್ಘಾಟನೆ ಹಾಗೂ ಗಣತಿದಾರರಿಗೆ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆ- ಮನೆಗೂ ಭೇಟಿ: ಪೂರ್ವ ಸಮೀಕ್ಷೆಯ ಭಾಗವಾಗಿ ಈಗಾಗಲೇ ಗಣತಿದಾರರು ಕಟ್ಟಡಗಳ ಎಣಿಕೆ ಕಾರ್ಯವನ್ನು ಪೂರೈಸಿದ್ದಾರೆ. ಅದರ ಮುಂದಿನ ಹಂತವಾಗಿ ಇದೇ ತಿಂಗಳಿನಿಂದ ಜನಗಣತಿ ಕಾರ್ಯವೂ ನಡೆಯಲಿದ್ದು, ಅದರಂತೆ ಮನೆ- ಮನೆಗೂ ಭೇಟಿ ನೀಡಿ ಪ್ರತಿಯೊಬ್ಬರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಗಣತಿದಾರರಿಗೆ ಸೂಕ್ತ ಮಾಹಿತಿಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ: ಜನಗಣತಿ ನಿರ್ದೇಶನಾಲಯದ ಉಪ- ನಿರ್ದೇಶಕ ಎಸ್‌.ಚಿನ್ನದುರೈ ಮಾತನಾಡಿ, ಪ್ರಸ್ತುತ ಕೈಗೊಂಡಿರುವ ಪೂರ್ವ ಸಮೀಕ್ಷೆ, 2021ರಲ್ಲಿ ನಡೆಸುವ ಜನಗಣತಿಗೆ ಒಂದು ಪೂರ್ವ ಸಿದ್ಧತೆ ಮಾತ್ರ ಆಗಿರುತ್ತದೆ. ಈ ಹಂತದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಜನಗಣತಿಯ ಸಮಯದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೋಡಿ ಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು.

ಮೊಬೈಲ್‌ ಆ್ಯಪ್‌ ಮುಖಾಂತರ ಎಣಿಕೆ: ಜನಗಣತಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮೊಬೈಲ್‌ ಆ್ಯಪ್‌ ಮುಖಾಂತರ ಎಣಿಕೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ. ಇದುವರೆಗೆ ಜನಗಣತಿಯಲ್ಲಿ ಸಾರ್ವಜನಿಕರ ಮಾಹಿತಿಯನ್ನು ಬರೆದುಕೊಳ್ಳಬೇಕಿತ್ತು. ಆದರೆ ಈ ಬಾರಿಯಿಂದ ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ಸಂಗ್ರಹಣೆ ನಡೆಯಲಿದ್ದು, ಇದು ಎಣಿಕೆ ಕಾರ್ಯವನ್ನು ಇನ್ನಷ್ಟು ಸುಲಭಗೊಳಿಸಲಿದೆ ಎಂದು ಮಾಹಿತಿ ನೀಡಿದರು.

Advertisement

ಅಗತ್ಯ ಮಾಹಿತಿ ಸಂಗ್ರಹ: ಜನಗಣತಿಯ ಈ ಪೂರ್ವ ಸಮೀಕ್ಷಾ ಕಾರ್ಯಕ್ರಮಕ್ಕೆ ಚಾಮರಾಜಗರ ಜಿಲ್ಲೆಯ ಉಮ್ಮತ್ತೂರು, ನಾಗವಳ್ಳಿ, ಸರಗೂರು, ಕೊತ್ತಲವಾಡಿ ಮತ್ತು ಹೆಬ್ಬಸೂರು ಗ್ರಾಮಗಳು ಆಯ್ಕೆಯಾಗಿವೆ. ಇದೇ ತಿಂಗಳ 10ರಿಂದ 29ರವರೆಗೆ ಸಮೀಕ್ಷೆ ನಡೆಯಲಿದ್ದು, ಗಣತಿದಾರರು ಪ್ರತಿಯೊಬ್ಬರ ಹೆಸರು, ಹುಟ್ಟಿದ ದಿನಾಂಕ, ವಯಸ್ಸು, ಶಿಕ್ಷಣ, ಆರ್ಥಿಕ ಸ್ಥಿತಿಗತಿ ಮುಂತಾದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ ಎಂದು ಚಿನ್ನದುರೈ ತಿಳಿಸಿದರು. ತಹಶೀಲ್ದಾರ್‌ ನಂಜುಂಡಯ್ಯ, ಹಿರಿಯ ಅಧಿಕಾರಿ ರವಿಕುಮಾರ್‌ ಶರ್ಮ ಮತ್ತಿತ್ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next