ಬೀದರ: ಜನ ಸಾಮಾನ್ಯರಿಗೆ ಅರಿವು ಮೂಡಿಸಿ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣಕ್ಕೆ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸಹಕರಿಸಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶಿವಶಂಕರ ಬಿ. ಕರೆ ನೀಡಿದರು.
ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಐಇಸಿ ವಿಭಾಗ, ಜಿಲ್ಲಾ ಅಸಾಂಕ್ರಮಿಕ ರೋಗಗಳ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ಜಾಗೃತಿ ದಿನ ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಿದ್ದಲ್ಲಿ ಚಿಕಿತ್ಸೆಯಿಂದ ಗುಣಮುಖ ಆಗಬಹುದು ಎಂದರು.
ಉಪನ್ಯಾಸಕರಾಗಿ ಮಾತನಾಡಿದ ಡಾ| ಆದರ್ಶ, ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ ಮಧ್ಯಪಾನ. ಝಂಕ್ ಫುಡ್ಸ್ ನಾರಿನಾಂಶ ಮತ್ತು ಕಡಿಮೆ ಹಣ್ಣು, ತರಕಾರಿಗಳ ಸೇವನೆಯಿಂದಾಗಿ ಬಾಯಿ ಕ್ಯಾನ್ಸರ್ ಅಧಿಕ ಪ್ರಮಾಣದಲ್ಲಿ ಹರಡುತ್ತಿದೆ. ಹೊಗೆ ಸೊಪ್ಪಿನಂತಹ ಆಹಾರ ಸೇವನೆ, ರಾಸಾಯನಿಕಗಳಿಂದಾಗಿ ಶ್ವಾಸಕೋಶ ಕ್ಯಾನ್ಸರ್ ಹೆಚ್ಚುತ್ತಿದೆ. ಗರ್ಭನಾಳ ಕ್ಯಾನ್ಸರ್‌ಗೆ ಮಹಿಳೆಯರು ಋತುಸ್ರಾವ ಸಂದರ್ಭದ ಶುಚಿತ್ವ, ಸುರಕ್ಷಿತ ಲೈಂಗಿಕ ಕ್ರಿಯೆ, ಪದೇ-ಪದೇ ಗರ್ಭಧಾರಣೆ ಅಥವಾ ಗರ್ಭಪಾತ ಇತ್ಯಾದಿ ಕಾರಣಗಳಿಂದಾಗಿ ಗರ್ಭನಾಳದ ಕ್ಯಾನ್ಸರ್ ಹಾಗೂ ವಯಕ್ತಿಕ ಶುಚಿತ್ವದ ಕ್ಯಾನ್ಸರ್‌ದಿಂದಾಗಿ ಮತ್ತು ಪದೇ-ಪದೇ ಸ್ತನಗಳನ್ನು ಪರೀಕ್ಷಿಸದ ಕಾರಣದಿಂದಾಗಿ ಸ್ತನ ಕ್ಯಾನ್ಸರ್ ಕೂಡ ಹಬ್ಬುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ಮಾತನಾಡಿ, ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ, ಜನರಲ್ಲಿ ತಪ್ಪು ನಂಬಿಕೆಗಳನ್ನು ಹೋಗಲಾಡಿಸುವುದು ಮತ್ತು ರೋಗಕ್ಕಿರುವ ಚಿಕಿತ್ಸೆ ಹಾಗೂ ಚಿಕಿತ್ಸಾ ಕೇಂದ್ರಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದೇ ದಿನಾಚರಣೆಯ ಉದ್ದೇಶ. ಈ ವರ್ಷ ಆರೈಕೆ ಅಂತರವನ್ನು ಕಡಿತಗೊಳಿಸಿ ಎಂಬ ಧ್ಯೆಯ ವಾಕ್ಯದೊಂದಿಗೆ ಕ್ಯಾನ್ಸರ್ ದಿನ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ| ರಾಜಶೇಖರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಯಾನ್ಸರ್ ರೋಗ, ಹೃದಯ ಹಾಗೂ ಮಧುಮೇಹ ರೋಗಕ್ಕೆ ಸಂಬಂಧಿಸಿದ ಮುದ್ರಣ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು.
ಸಂಜೆ ಐತಿಹಾಸಿಕ ಸ್ಮಾರಕ ಚೌಬಾರಕ್ಕೆ ನೀಲಿ ದೀಪ ಅಳವಡಿಸಿ ಜನಜಾಗೃತಿ ಮೂಡಿಸಲಾಯಿತು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ| ಸಂಜೀವಕುಮಾರ ಪಾಟೀಲ, ಡಾ| ವೀರೇಶ, ಪ್ರವೀಣ ಇನ್ನಿತರ ಅಧಿಕಾರಿ, ಸಿಬ್ಬಂದಿ ಇದ್ದರು.