ಬೆಂಗಳೂರು: ಸಮರ್ಥ ನಾಯಕತ್ವ, ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಮನವಿ ಮಾಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆಯಲ್ಲಿ ಸೋಮವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವನಾಗಿ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿದ್ದೇನೆ. ಕೇಂದ್ರ ಮತ್ತು ರಾಜ್ಯದ ಕೊಂಡಿಯಾಗಿ ಅನುದಾನ ತರುವಲ್ಲಿ ನೆರವಾಗಿದ್ದೇನೆ. ಹೀಗಾಗಿ ತನ್ನನ್ನು ಪುನರ್ ಆಯ್ಕೆ ಮಾಡಬೇಕೆಂದು ಕೋರಿದರು.
ಕ್ಷೇತ್ರದಲ್ಲಿ ರೈಲ್ವೆ ಅಂಡರ್‌ಪಾಸ್, ಕುಡಿಯುವ ನೀರಿನ ಘಟಕಗಳು, ಬಸ್ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಯಶವಂತಪುರಕ್ಕೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದು, ಶೀಘ್ರವೇ ಆರಂಭವಾಗಲಿದೆ. ಜತೆಗೆ ಉಜ್ವಲ ಯೋಜನೆಯಡಿ ಬಡವರಿಗೆ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ ತಮ್ಮ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು, ಇನ್ನು ಮುಂದೆಯೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಳೆದ ಐದು ವರ್ಷದಲ್ಲಿ ಜನ ಮೆಚ್ಚುವಂತಹ ಆಡಳಿತ ನೀಡಿದೆ. ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮಕೈಗೊಂಡಿದೆ ಎಂದು ಹೇಳಿದರು.
ಜಾಲಹಳ್ಳಿಯಲ್ಲಿ ಪಾಸ್ ಪೋರ್ಟ್ ಕೇಂದ್ರ ಸ್ಥಾಪನೆಗೆ ಕ್ರಮಕೈಗೊಂಡಿದ್ದು, ಮೆಟ್ರೋ 2ನೇ ಹಂತ ಯೋಜನೆಗೆ ಶ್ರಮಿಸಿದ್ದೇನೆ. ಬೆಂಗಳೂರಿಗೆ ನಾಲ್ಕು ಟಿಎಂಸಿ ಕಾವೇರಿ ನೀರು ಸಿಗಲು ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಅಫಿಡೆವಿಟ್ ಸಲ್ಲಿಸುವಾಗ ಸಹಕಾರ ನೀಡಿದ್ದೇನೆ ಎಂದು ತಿಳಿಸಿದರು.
ಪ್ರಚಾರ ಸಭೆಯಲ್ಲಿ ಮುಖಂಡರಾದ ನರಸಿಂಹಮೂರ್ತಿ, ರಮೇಶ್, ವರಲಕ್ಷ್ಮೀ ವೀರೇಶ್, ನವೀನಾ, ಅನುಪಮಾ, ಪ್ರೇಮಾ ನಾಗಯ್ಯ, ಸೌಮ್ಯ, ರಮೇಶ್ ಹೊನಗನಹಟ್ಟಿ ಮತ್ತಿತರರು ಹಾಜರಿದ್ದರು.