ಮಂಡ್ಯ: ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಲ್‌ಗೆ 10,300 ರೂ. ಬೆಂಬಲ ಬೆಲೆ ಘೋಷಿಸಿದೆ ಎಂದು ಡೀಸಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ಡೀಸಿ ಸಭಾಂಗಣದಲ್ಲಿ 2020ನೇ ಸಾಲಿನ ಬೆಂಬಲ ಯೋಜನೆಯಡಿ ಕೊಬ್ಬರಿ ಖರೀದಿ ಕೇಂದ್ರ ತೆರೆಯುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
ಬೆಂಬಲ ಯೋಜನೆಯಡಿ ಕೊಬ್ಬರಿ ಖರೀದಿ ಕೇಂದ್ರಪ್ರಾರಂಭಿಸಲಾಗುವುದು. ರೈತರು ಕೊಬ್ಬರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ನೋಂದಣಿ ಮಾಡಿಸಿಕೊಳ್ಳಬೇಕು. ಕೊಬ್ಬರಿ ಖರೀದಿ ಏಜೆನ್ಸಿಗಳು ಸರ್ಕಾರ ಆದೇಶಿಸಿರುವಂತೆ ಪಾಂಡವಪುರ, ನಾಗ ಮಂಗಲದ ಕದಬಹಳ್ಳಿ, ಮಂಡ್ಯ ಮತ್ತು ಕೆ.ಆರ್. ಪೇಟೆಯಲ್ಲಿ ರೈತ ನೋಂದಣಿ ಕೇಂದ್ರಗಳನ್ನು ಆರಂಭಿಸಿ ನೋಂದಣಿ ಆರಂಭಿ ಸು ವಂತೆ ಅಧಿಕಾರಿಗಳಿಗೆ ತಿಳಿಸಿದರು.
ನೋಂದಣಿಗೆ ಅವಕಾಶ: ನೋಂದಣಿ ಕಾರ್ಯವನ್ನು ಸರ್ಕಾರದ ಆದೇಶದನ್ವಯ ಜೂ.26 ರವರೆಗೂ ನೋಂದಣಿ ಮಾಡಲು ಅವಧಿಯನ್ನು ವಿಸ್ತರಿಸಿದೆ. ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ಕೆ. ಆರ್.ಪೇಟೆಯಲ್ಲಿ 8000 ರೂ.ನಿಂದ 9,500 ರೂ, ನಾಗಮಂಗಲ ತಾಲೂಕಿನ ಕದಬಹಳ್ಳಿಯಲ್ಲಿ 8,600 ರೂ.ನಿಂದ 9,600 ರೂ.ವರೆಗೆ ದರ ಚಾಲ್ತಿಯಲ್ಲಿರುತ್ತದೆ. ಪ್ರತಿಯೊಬ್ಬ ರೈತರಿಂದ ಒಂದು ಎಕರೆಗೆ 6 (ಆರು) ಕ್ವಿಂಟಲ್‌ನಂತೆ ಗರಿಷ್ಠ 20 ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಮಾತ್ರ ಖರೀದಿಸಬಹುದು ಎಂದು ತಿಳಿಸಿದರು.
ಖರೀದಿಸಿದ ಕೊಬ್ಬರಿಯನ್ನು ದಾಸ್ತಾನು ಮಾಡಲು ಖರೀದಿ ಕೇಂದ್ರದ 30 ಕಿ.ಮೀ. ವ್ಯಾಪ್ತಿಯ ಒಳಗೆ ಗೋದಾಮುಗಳ ವ್ಯವಸ್ಥೆ ಮಾಡಲು ರಾಜ್ಯ ಹಾಗೂ ಕೇಂದ್ರ ಉಗ್ರಾಣ ನಿಗಮಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಡೀಸಿ, ಜಿಲ್ಲಾ ಟಾಸ್ಕಫೋರ್ಸ್ ಸಮಿತಿ ಅಧ್ಯಕ್ಷರು ಖರೀದಿ ಏಜೆನ್ಸಿಗಳಿಗೆ ತಿಳಿಸಿದರು. ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ಎಂ.ನಂಜುಂಡಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು ವಾರ್ತಾ ಇಲಾಖೆ ಸಹಾಯಕ ಅಧಿಕಾರಿ ಟಿ.ಕೆ.ಹರೀಶ್ ಇದ್ದರು.