Advertisement

ಬಿಜೆಪಿ ಮಣಿಸಲು ಕಾಂಗ್ರೆಸ್‌ಗೆ ಅನ್ಯ ಪಕ್ಷಗಳ ಬೆಂಬಲ !

01:00 AM Mar 19, 2019 | Harsha Rao |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ರಾಜಕೀಯ ಧ್ರುವೀಕರಣ ನಡೆಯುತ್ತಿದ್ದು, ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷಗಳಿಂದ ಒಗ್ಗಟ್ಟಿನ ತಂತ್ರಗಾರಿಕೆ ರೂಪಿಸುವ ಲೆಕ್ಕಾಚಾರ ನಡೆಯುತ್ತಿದೆ. ಈ ಮೂಲಕ ಬಿಜೆಪಿ ವಿರುದ್ಧ ಮತಗಳ ವಿಭಜನೆಯಾಗದಂತೆ ನೋಡಿಕೊಳ್ಳಲು ವಿಪಕ್ಷಗಳು ನಿರ್ಧರಿಸಿವೆ.

Advertisement

ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್‌- ಜೆಡಿಎಸ್‌ ನಡುವೆ ಸೀಟು ಹಂಚಿಕೆ ಕುರಿತು ಮಾಡಿಕೊಂಡಿರುವ ಒಪ್ಪಂದದಂತೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಅಭ್ಯರ್ಥಿಗೆ ಬೆಂಬಲ ಘೋಷಿಸಿದೆ. ಇನ್ನು ಜಿಲ್ಲೆಯಲ್ಲಿ ಪ್ರಮುಖವಾಗಿರುವ ಸಿಪಿಎಂ, ಸಿಪಿಐ ಪಕ್ಷಗಳು ಕೂಡ ಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದು, ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಬಹುತೇಕ ನಿಶ್ಚಿತವಾಗಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಎಸ್‌ಡಿಪಿಐ ಕೂಡ ಈ ಬಾರಿಯೂ ಸ್ಪರ್ಧಿಸುವುದಾಗಿ ಘೋಷಿಸಿದೆ.

1951ರಿಂದ 2014ರ ವರೆಗೆ ಕ್ಷೇತ್ರದಲ್ಲಿ ನಡೆದಿರುವ ಒಟ್ಟು 16 ಲೋಕಸಭಾ ಚುನಾವಣೆಗಳಲ್ಲಿ  ಸಿಪಿಎಂ 6 ಬಾರಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿತ್ತು. ಉಳಿದಂತೆ ಮಿತ್ರಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸಿತ್ತು. ಜೆಡಿಎಸ್‌ 1989ರಿಂದ 2004ರ ವರೆಗೆ  ನಾಲ್ಕು ಬಾರಿ ಸ್ಪರ್ಧೆ ಮಾಡಿದೆ. 2009 ಹಾಗೂ 2014ರ ಚುನಾವಣೆಗಳಲ್ಲಿ  ಜೆಡಿಎಸ್‌ ಅಭ್ಯರ್ಥಿಯನ್ನು  ಕಣಕ್ಕಿಳಿಸಿರಲಿಲ್ಲ. ಸಿಪಿಐ ಎರಡು ಬಾರಿ ಸ್ಪರ್ಧೆ ಮಾಡಿದೆ.  

ಮೈತ್ರಿ ಪಾತ್ರವೇನು? 
ಮಂಗಳೂರು, ಆ ಬಳಿಕದ  ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಲೋಕಸಭಾ ಚುನಾವಣೆಯ ಇತಿಹಾಸವನ್ನು ಪರಿಗಣಿಸಿದರೆ 1984ರ ಬಳಿಕ ಈ ಕ್ಷೇತ್ರದಲ್ಲಿ ನೇರ ಹಣಾಹಣಿ ನಡೆದಿರುವುದು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ. 1996ರಲ್ಲಿ ಮಾತ್ರ  ಇಲ್ಲಿ ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸಿ ಕಾಂಗ್ರೆಸ್‌ ಸೋಲಿಗೆ ಕಾರಣವಾಗಿತ್ತು. ಜಿ.ವಿ. ಜೀವಿಜಯ 1,80,889 ಮತಗಳನ್ನು ಗಳಿಸಿದ್ದರು. ಬಳಿಕ ಜಿಲ್ಲೆಯಲ್ಲಿ ಶಕ್ತಿ ವರ್ಧಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲೂ ಜೆಡಿಎಸ್‌ ಕನಿಷ್ಠ ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಜೆಡಿಎಸ್‌ ಮೈತ್ರಿ ಕಾಂಗ್ರೆಸ್‌ ಪಾಲಿಗೆ ಒಂದಷ್ಟು ಮತಗಳನ್ನು ಮಾತ್ರ ಹೆಚ್ಚಿಗೆ ತಂದುಕೊಡುವಲ್ಲಿ ಸಹಕಾರಿಯಾದೀತು ಎಂದು ವಿಶ್ಲೇಷಕರ ಅಭಿಪ್ರಾಯ.

ಸ್ಪರ್ಧೆಯಲ್ಲಿ  ತೃಪ್ತಿಕಂಡ ಎಡಪಕ್ಷಗಳು
ಸಿಪಿಎಂನಿಂದ 1967ರಲ್ಲಿ ಸ್ಪರ್ಧಿಸಿದ್ದ ಬಿ.ಎನ್‌. ಕುಟ್ಟಪ್ಪ 57,776, 1980ರಲ್ಲಿ ಸ್ಪರ್ಧಿಸಿದ್ದ  ಮಹಾಬಲೇಶ್ವರ ಭಟ್‌ 23,619,  1991ರಲ್ಲಿ ಸ್ಪರ್ಧಿಸಿದ್ದ  ಪಿ. ರಾಮಚಂದ್ರ ರಾವ್‌  28010,  2009ರಲ್ಲಿ ಸ್ಪರ್ಧಿಸಿದ್ದ ಬಿ. ಮಾಧವ ಅವರು 18,328 ಹಾಗೂ 2014 ರಲ್ಲಿ ಸ್ಪರ್ಧಿಸಿದ್ದ  ಯಾದವ ಶೆಟ್ಟಿ ಅವರು 9324 ಮತಗಳನ್ನು  ಪಡೆದಿದ್ದರು. ಈ  ಬಾರಿ ಸಿಪಿಎಂ ಸ್ಪರ್ಧಿಸದಿರಲು  ನಿರ್ಧರಿಸಿರುವುದರಿಂದ ಪಕ್ಷದ ಮತಗಳು ಬಿಜೆಪಿ ವಿರುದ್ಧ ಧ್ರುವೀಕರಣವಾಗುವ ಸಾಧ್ಯತೆಗಳಿವೆ.  ಸಿಪಿಐ ವತಿಯಿಂದ 1957 ರಲ್ಲಿ  ಸ್ಪರ್ಧಿಸಿದ್ದ ಕೃಷ್ಣ ಶೆಟ್ಟಿ  ಎ. ಅವರು 85,373 ಹಾಗೂ 1962ರಲ್ಲಿ  ಸ್ಪರ್ಧಿಸಿದ್ದ  ಬಿ.ವಿ.ಕಕ್ಕಿಲ್ಲಾಯ ಅವರು 59,656 ಮತಗಳನ್ನು ಪಡೆದಿದ್ದರು.

Advertisement

ಶಕ್ತಿವರ್ಧಿಸುವಲ್ಲಿ ಜೆಡಿಎಸ್‌  ವಿಫಲ
1989ರಲ್ಲಿ  ಜನತಾದಳದಿಂದ ಸ್ಪರ್ಧಿಸಿದ್ದ  ಎಂ. ಮಹಮ್ಮದ್‌ ಹುಸೇನ್‌ 1,33,533, 1996ರಲ್ಲಿ ಸ್ಪರ್ಧಿಸಿದ್ದ  ಜಿ.ವಿ. ಜೀವಿಜಯ ಅವರು 1,80,889, 1999ರಲ್ಲಿ ಸ್ಪರ್ಧಿಸಿದ್ದ  ಲೋಕೇಶ್ವರಿ ವಿನಯಚಂದ್ರ 20980, 2004ರಲ್ಲಿ ಎ.ಕೆ. ಸುಬ್ಬಯ್ಯ 39,776  ಮತಗಳನ್ನು ಪಡೆದಿದ್ದರು. 2009 ಹಾಗೂ 2014ರ ಲೋಕಸಭಾ ಚುನಾವಣೆಗಳಲ್ಲಿ  ಸ್ಪರ್ಧೆ ಮಾಡಿರಲಿಲ್ಲ.

ದ.ಕ. ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಎಸ್‌ಡಿಪಿಐ  ವತಿಯಿಂದ ಸ್ಪರ್ಧೆ ಮಾಡಿದ್ದ ಹನೀಫ್‌ ಖಾನ್‌ ಕೊಡಾಜೆ 27,254 ಮತ ಗಳಿಸಿದ್ದರು. ಈ ಬಾರಿಯೂ  ಸ್ಪರ್ಧೆ ಮಾಡುವುದಾಗಿ ಎಸ್‌ಡಿಪಿಐ ಈಗಾಗಲೇ ಘೋಷಿಸಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌ 5 ಕಡೆ ಹಾಗೂ ಸಿಪಿಎಂ 3 ಕಡೆ ಸ್ಪರ್ಧಿಸಿದ್ದರೂ ಗಳಿಸಿದ ಮತಗಳ ಪ್ರಮಾಣ ಅತ್ಯಂತ ಕಡಿಮೆಯಾಗಿತ್ತು. ಜೆಡಿಎಸ್‌ ಮಂಗಳೂರು, ಮಂಗಳೂರು ದಕ್ಷಿಣ, ಮೂಡುಬಿದಿರೆ, ಪುತ್ತೂರು ಹಾಗೂ ಬೆಳ್ತಂಗಡಿ ಸೇರಿ ಒಟ್ಟು 5 ಕ್ಷೇತ್ರಗಳಲ್ಲಿ  ಸ್ಪರ್ಧೆ ಮಾಡಿತ್ತು. ಸಿಪಿಎಂ ಪಕ್ಷದ ಪರಿಸ್ಥಿತಿಯೂ ಇದೇ ಆಗಿತ್ತು.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next