ಗಂಗಾವತಿ: ದೇಶದ ಅಖಂಡತೆ ಮತ್ತು ಸಾರ್ವಭೌಮತೆ ಎತ್ತಿ ಹಿಡಿಯುವ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಕ್ಕೆ ಭಾರತಿಯರೆಲ್ಲರೂ ಸಾಥ್ ನೀಡುವುದು ಅಗತ್ಯವಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರ ದೇಶ ಮುನ್ನಡೆಸಲು ಡಾ| ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ವಿಶ್ವದ ಪ್ರಸಿದ್ಧ ಸಂವಿಧಾನ ರಚಿಸಲಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹೇಗೆ ಕೆಲಸ ನಿರ್ವಹಿಸಬೇಕು. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳೇನು ಕಲ್ಯಾಣ ರಾಜ್ಯದ ಪರಿಕಲ್ಪನೆ ಹೇಗಿರಬೇಕು ಎಂಬುದನ್ನು ಸಂವಿಧಾನದಲ್ಲಿ ಉಲ್ಲೇಖೀಸಲಾಗಿದೆ. ಕಾಲಕ್ಕೆ ತಕ್ಕಂತೆ ಸಂವಿಧಾನಕ್ಕೆ ಮೂಲ ಸಿದ್ದಂತಕ್ಕೆ ಧಕ್ಕೆಯಾಗದಂತೆ ತಿದ್ದುಪಡಿ ಮಾಡುವ ಮೂಲಕ ದೇಶದ ಜನರಿಗೆ ಅನುಕೂಲವಾಗುವಂತಹ ಕಾನೂನು ರಚನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ವೀರೇಶ ಬಿರಾದಾರ, ದೇಶದ ಸಮಗ್ರತೆಗಾಗಿ ಸಂವಿಧಾನ ಅನುಲಕ್ಷಿಸಿ ಸರ್ವರೂ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಡಾ| ಬಾಬಾಸಾಹೇಬ ಅಂಬೇಡ್ಕರ್ ಮತ್ತು ವಿಶ್ವಗುರು ಬಸವಣ್ಣನವರ ಮಾರ್ಗದಲ್ಲಿ ನಡೆಯುವ ಮೂಲಕ ವಿಶ್ವಕ್ಕೆ ಸಾಧನೆ ತೋರಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಅಯೋಧ್ಯಾ ರಾಮಾಚಾರ್, ಸಿರಾಮಿಕ್ ಮತ್ತು ಸಿಮೆಂಟ್ ವಿಷಯದ ಸ್ನಾತಕ ಪದವಿಯಲ್ಲಿ ಚಿನ್ನದ ಪದಕ ಪಡೆದ ಶ್ವೇತಾ ಕುಲಕರ್ಣಿ ಸೇರಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು.
ತಾಪ ಅಧ್ಯಕ್ಷ ವಿರೂಪಾಕ್ಷಗೌಡ ಮಾಲೀಪಾಟೀಲ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಜಿಪಂ ಸದಸ್ಯ ಅಮರೇಶ ಗೋನಾಳ, ತಾಪಂ ಸದಸ್ಯರಾದ ಮಹಮದ್ ರಫಿ, ಶಂಭಣ್ಣ, ಡಿವೈಎಸ್‌ಪಿ ಸಂತೋಷ ಬನಹಟ್ಟಿ, ಪೌರಾಯುಕ್ತ ಡಾ| ದೇವಾನಂದ ದೊಡ್ಮನಿ, ನಗರಸಭೆ ಸದಸ್ಯರಾದ ನವೀನಕುಮಾರ ಪಾಟೀಲ, ಚೌಡ್ಕಿ ರಮೇಶ, ಸುಲೋಚನಾ ಶಿರಿಗೇರಿ, ಎಪಿಎಂಸಿ ಸದಸ್ಯ ಶರಣೇಗೌಡ ಇದ್ದರು. ಶಾಲಾಮಕ್ಕಳ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿಪಿಎಸ್ ಮತ್ತು ಕಿಲ್ಲಾ ಸರಕಾರಿ ಶಾಲೆ ಮಕ್ಕಳು ಪ್ರದರ್ಶಿಸಿದ ಭಾವೈಕ್ಯತೆ ನೃತ್ಯ ರೂಪಕ ಪ್ರೇಕ್ಷಕರ ಮನಸೂರೆಗೊಂಡಿತು.
ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್‌ಶಾಲೆಯಲ್ಲಿ ಗಣರಾಜ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ, ನಿರ್ದೇಶಕ ಎಚ್.ಕೆ. ಚಂದ್ರಮೋಹನ್, ಪ್ರಾಚಾರ್ಯ ವಿ.ಮುರುಳಿಕೃಷ್ಣ ಇದ್ದರು.
ನಗರದ ಕ್ಷೇತ ್ರಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಿಇಒ ಸಿದ್ದಲಿಂಗಮೂರ್ತಿ ಧ್ವಜಾರೋಹಣ ನೆರವೇರಿಸಿದರು.ನಗರದ ಎಪಿಎಂಸಿಯಲ್ಲಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ ಧ್ವಜಾರೋಹಣ ನೆರವೇರಿಸಿದರು.