ತಿ.ನರಸೀಪುರ: ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ರೈತರ ಸಾಲ ಮನ್ನಾ ಮಾಡಿ ಕೃಷಿಗೆ ಹೆಚ್ಚು ಒತ್ತು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲಕಾಡು ಹೋಬಳಿ ಮಡವಾಡಿಯಿಂದ ಆರಂಭಿಸಿದ ವಿಕಾಸ ಪರ್ವ ಯಾತ್ರೆಯು ತಲಕಾಡು ಹೆಮ್ಮಿಗೆ, ಮಾದಾಪುರ ಮಾರ್ಗವಾಗಿ ಮೂಗೂರು ಗ್ರಾಮಕ್ಕೆ ಆಗಮಿಸಿದರು.
ತ್ರಿಪುರಸುಂದರಿ ಅಮ್ಮನವರ ದೇವಾಲಯದ ಮುಂಭಾಗದಲ್ಲಿ ವಿಕಾಸ ವಾಹಿನಿಯ ಮೇಲೆ ನಿಂತು ಮಾತನಾಡಿ, ರಾಜ್ಯದ ರೈತರ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಹೊಸ ಕೃಷಿ ನೀತಿಯನ್ನು ಜಾರಿ ತರಲು ಈಗಾಗಲೇ ಇಸ್ರೇಲ್‌ಗೆ ಭೇಟಿ ನೀಡಿ ಅಲ್ಲಿನ ರೈತರ ಅಭಿವೃದ್ಧಿಯ ಅಗತ್ಯ ಮಾಹಿತಿ ಪಡೆದು ಈ ನಾಡಿನ ರೈತರ ಉದ್ಧಾರ ಮಾಡುವ ನಿಟ್ಟಿನಲ್ಲಿ ನಮ್ಮ ಚಿಂತನೆಗಳಿದೆ ಎಂದರು.
ಪ್ರಣಾಳಿಕೆಯಲ್ಲಿ ಹಲವು ಭರವಸೆ: ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸ್ತ್ರೀಯರ ಅಭಿವೃದ್ಧಿಗೆ ಸೂಕ್ತ ಯೋಜನೆ, ಯುವಕರಿಗೆ ಉದ್ಯೋಗ ಮತ್ತು ಅಭಿವೃದ್ಧಿಗೆ ಪ್ರೋತ್ಸಾಹಿಸುವ ಯೋಜನೆಗಳು, 70 ವರ್ಷ ಮೇಲ್ಪಟ್ಟ ನಾಗರೀಕರಿಗೆ ತಿಂಗಳಿಗೆ 5 ಸಾವಿರ ರೂ.ಗೌರವ ಧನ ನೀಡುವ ಯೋಜನೆ ನಮ್ಮ ಪ್ರಣಾಳಿಕೆಯಲ್ಲಿದೆ. ಪ್ರತಿ ಅಂಗವಿಕಲರಿಗೆ , ವಿಧವೆಯರಿಗೆ ಮಾಸಿಕ 2 ಸಾವಿರ ಗೌರವಧನ ನೀಡುವುದಾಗಿ ಅವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೈಗೊಳ್ಳುಬಹುದಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರ ನೀಡಿದರು.
ಸಲಹೆಯೇ ಮಾರ್ಗಸೂಚಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ದಿವಾಳಿ ಮಾಡಿರುವ ರೀತಿಯಲ್ಲಿ ನಮ್ಮ ಸರ್ಕಾರ ಇರಲ್ಲ. ಎಲ್ಲ ಸಮುದಾಯಗಳಿಗೂ ಸ್ಪಂದಿಸುವ ಹಾಗೂ ಅವರ ಪರವಾಗಿ ಹೋರಾಟ ಮಾಡುವ ಇಚ್ಚೆ ನನ್ನದಾಗಿದೆ. ತಾವು ಮಗನೆಂದು ಭಾವಿಸಿ ನಮ್ಮ ಪಕ್ಷವನ್ನು ಬೆಂಬಲಿಸಿ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ನೀವು ನೀಡುವ ಸಲಹೆ ಗಳೇ ನಮ್ಮ ಸರ್ಕಾರದ ಮಾರ್ಗಸೂಚಿಗಳಾಗುತ್ತವೆ ಎಂದು ಅವರು ಹೇಳಿದರು.
ಕ್ಷೇತ್ರದ ಅಭ್ಯರ್ಥಿ ಎಂ. ಅಶ್ವಿನ್ ಕುಮಾರ್, ಆಲನಹಳ್ಳಿ ಜಿ.ಪಂ ಸದಸ್ಯ ಮಾದೇಗೌಡ, ಕ್ಷೇತ್ರಾಧ್ಯಕ್ಷ ಸಿ.ಬಿ. ಹುಂಡಿ ಚಿನ್ನಸ್ವಾಮಿ, ತಾ.ಪಂ ಸದಸ್ಯ ಬಿ. ಸಾಜಿದ್ ಆಹಮದ್, ಮಾಜಿ ಉಪಾಧ್ಯಕ್ಷ ಎಂ.ಎಸ್. ಬಸವರಾಜು, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಬಿ. ಮಂಜುನಾಥ್(ಮಷಣೇಗೌಡ), ಯುವ ಘಟಕದ ಅಧ್ಯಕ್ಷ ದಿಲೀಪ್ ಕುಮಾರ್, ಗ್ರಾ.ಪಂ ಸದಸ್ಯ ಶಿವು, ಎಂ. ಆರ್. ಶಿವಮೂರ್ತಿ,
ಮುಖಂಡರಾದ ದೇವಾನಂದ್, ಎಂ.ಕೆ.ಸಿದ್ದರಾಜು, ಗುರುಸಿದ್ದಪ್ಪ, ಕನ್ನಹಳ್ಳಿ ಚಿಕ್ಕಸ್ವಾಮಿ, ಸಿ. ಕುಮಾರ್, ಕೆಂಪಯ್ಯನಹುಂಡಿ ಎಂ. ಬಾಲಕೃಷ್ಣ, ಅಂದಾನಿಗೌಡ, ತಿರಮಕೂಡಲು ಶ್ರೀನಿವಾಸ, ಜಯರಾಂ. ಕಾಮಳ್ಳಿ ಸುರೇಶ್, ವಕೀಲ ರವಿ, ನಂಜುಂಡಸ್ವಾಮಿ, ನಿಲಸೋಗೆ ಪ್ರಸಾದ್, ಗಂಗಾಧರ್, ಟೌನ್ ಗೋಪಿ, ಊಟಿ ಮಹದೇವ್, ದೀಪದರ್ಶನ್, ಸತೀಶ್, ಮತ್ತಿತರರರು ಇದ್ದರು.
ವಿರೋಧಿಗಳ ಜತೆ ಶಾಮೀಲಾಗಿಲ್ಲ: ನಮ್ಮ ಪಕ್ಷದ ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಅವರು ಪ್ರಾಮಾಣಿಕ ಕಾರ್ಯಕರ್ತರಾಗಿದ್ದು, ಅವರು ಯಾವ ಪಕ್ಷ ಅಥವಾ ವ್ಯಕ್ತಿ ಜತೆ ಶಾಮೀಲಾಗುವ ಅಗತ್ಯವಿಲ್ಲ. ಅವರ ಸರಳ, ಸಜ್ಜನಿಕೆ, ಸಾಧು ವ್ಯಕ್ತಿತ್ವ ನಮಗೆ ಇಷ್ಟವಾದ ಹಿನ್ನಲೆಯಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಯಾವುದೇ ಅಪಪ್ರಚಾರದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ತಾವೆಲ್ಲರೂ ನಮ್ಮ ಅಭ್ಯರ್ಥಿಯಾದ ಅಶ್ವಿನ್‌ಕುಮಾರ್ ಅವರಿಗೆ ಮತ ನೀಡುವ ಮೂಲಕ ಜೆಡಿಎಸ್ ಅಧಿಕಾರಕ್ಕೇರಲು ಬೆಂಬಲಿಸುವಂತೆ ಕುಮಾರ ಸ್ವಾಮಿ ಮನವಿ ಮಾಡಿದರು.