ಆಳಂದ: ಕೇಂದ್ರದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಬೆಂಬಲಿಸಿ ನವೆಂಬರ್ 7ರಿಂದ ತಮಿಳುನಾಡಿನ ಕನ್ಯಾಕುಮಾರಿಯಿಂದ ದೆಹಲಿ ವರೆಗೆ ಬೃಹತ್ ಪ್ರಮಾಣದ ರೈತರ ರ್ಯಾಲಿ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ ಹೇಳಿದರು.
ಬಿಹಾರ್ ರಾಜ್ಯದ ಚಂಪಾರಣ್ಯದಿಂದ ವಾರಣಾಸಿ ವರೆಗೆ ಸಂಯುಕ್ತ ಕಿಸಾನ್ ಮೋರ್ಚಾದ ಕಿಸಾನ್ ಲೋಕನೀತಿ ಆಯೋಜಿಸಿದ್ದ ರೈತರ ಪಾದಯಾತ್ರೆ ಬೆಂಬಲಿಸಿ ಬುಧವಾರ ವಾರಣಾಸಿಯಲ್ಲಿ ಅವರು ಮಾತನಾಡಿದರು.
ಕಳೆದೊಂದು ವರ್ಷದಿಂದ ದೇಶದ ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸಿದ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿಲ್ಲ. ಆದ್ದರಿಂದ ಈ ಸರ್ಕಾರ ಜನವಿರೋಧಿಯಾಗಿದೆ ಎಂದರು.
ದಕ್ಷಿಣ ಭಾರತದ ತಮಿಳುನಾಡಿನ ಕನ್ಯಾಕುಮಾರಿಯಿಂದ ನವೆಂಬರ್ 7ರಂದು ರೈತರ ರ್ಯಾಲಿ ಹೊರಟು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣದ ಮೂಲಕ ದೆಹಲಿಗೆ ತಲುಪಿ ಅಲ್ಲಿ ನಡೆಯುವ ಬೃಹತ್ ಹೋರಾಟದಲ್ಲಿ ರ್ಯಾಲಿ ಪಾಲ್ಗೊಳ್ಳಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ರೈತರ ವಿರೋಧಿ ಧೂರಣೆ ಅನುಸರಿಸುವುದನ್ನು ಕೈಬಿಟ್ಟು ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ತೀರಾ ಬಡತನದಿಂದ ಕೂಡಿದ ಬಿಹಾರ, ಉತ್ತರ ಪ್ರದೇಶ ಪರಿಸ್ಥಿತಿ ಗಂಭೀರವಾಗಿದೆ. ಈ ಹೋರಾಟ ಕೇವಲ ರೈತರಿಗೆ ಸೀಮಿತವಲ್ಲ. ರೈತರು, ಕಾರ್ಮಿಕರು, ಜನ ಸಾಮಾನ್ಯರನ್ನು ಒಳಗೊಂಡ ದೇಶದ 120 ಕೋಟಿ ಜನರದ್ದಾಗಿದೆ. ಸಿಂಘು ಗಡಿಯಲ್ಲಿ ರೈತರ ಹೋರಾಟ ಅವಿಸ್ಮರಣಿಯವಾಗಿದೆ ಎಂದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ ಭೂಷಣ, ಮಧ್ಯ ಪ್ರದೇಶ ಮಾಜಿ ಶಾಸಕ ಡಾ| ಸುನೀಲ, ಪ್ರೊ| ಆನಂದ ಹಾಗೂ ನೂರಾರು ಜನರು ಪಾಲ್ಗೊಂಡಿದ್ದರು.