Advertisement

ಬೆಂಬಲ ಬೆಲೆಯಲ್ಲಿ ರಾಗಿ-ಭತ್ತ, ಜೋಳ ಖರೀದಿ: ಡಿಸಿ

12:32 PM Jan 06, 2017 | |

ದಾವಣಗೆರೆ: 2016-17ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಜ. 9ರಿಂದ ಭತ್ತ, ರಾಗಿ ಮತ್ತು ಜೋಳ ಖರೀದಿ ಕೇಂದ್ರ ಪ್ರಾರಂಭಿಸಲು  ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕ್ಪೋರ್ಸ್‌ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ದಾವಣಗೆರೆ, ಹೊನ್ನಾಳಿ, ಹರಿಹರ ತಾಲೂಕಿನ ಮಲೆಬೆನ್ನೂರು, ಚನ್ನಗಿರಿ ತಾಲೂಕಿನ ಸಾಗರಪೇಟೆ (ಬಸವಾಪಟ್ಟಣ)ದಲ್ಲಿ ಭತ್ತ, ಹರಪನಹಳ್ಳಿ ಮತ್ತು ಜಗಳೂರಲ್ಲಿ ರಾಗಿ, ಜೋಳ ಖರೀದಿ ಕೇಂದ್ರ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ  ಮಾಡಿಕೊಂಡು, ಜ. 9ರಿಂದಲೇ ಪ್ರಾರಂಭಿಸಬೇಕು ಎಂದು ಸೂಚಿಸಿದರು. 

ಪ್ರಾದೇಶಿಕ ಬೆಳೆಯ ಆಧಾರದ ಮೇಲೆ ಖರೀದಿ ಕೇಂದ್ರಗಳನ್ನು ತೆರೆದು, ಅಗತ್ಯ ದಾಖಲೆಗಳನ್ನು ಪಡೆದು ಎಫ್‌. ಎ. ಕ್ಯೂ ಮಾನದಂಡಗಳಿಗೆ ಅನುಗುಣವಾಗಿ ಖರೀದಿಸಬೇಕು. ಮಾನದಂಡದ ಪ್ರಕಾರ ಮೊದಲು ಭತ್ತದ ಮಾದರಿ ಪಡೆದು ಪರೀಕ್ಷಿಸಿ, ನಂತರ ಕಂದಾಯ ಇಲಾಖೆಯಿಂದ ಪಹಣಿ, ಬೆಳೆ ದೃಢೀಕರಣ, ಗುರುತಿನ ಚೀಟಿಯಾಗಿ ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಪಡೆದು ಭತ್ತ ಖರೀದಿಸಬೇಕು ಎಂದರು. 

ಆಹಾರ, ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ| ಬಿ.ಟಿ. ಮಂಜುನಾಥ್‌ ಮಾತನಾಡಿ, 2016-17 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಕ್ವಿಂಟಾಲ್‌ ಸಾಮಾನ್ಯ ಭತ್ತಕ್ಕೆ 1,470, ಗ್ರೇಡ್‌-ಎ ಭತ್ತಕ್ಕೆ 1,510 ರೂಪಾಯಿ ನಿಗದಿಪಡಿಸಿದೆ. ರಾಜ್ಯ ಸರ್ಕಾರದ 100 ರೂ. ಪ್ರೋತ್ಸಾಹ ಧನ ಸೇರಿಸಿ, ಖರೀದಿಸಲಾಗುವುದು. 

ಕ್ವಿಂಟಾಲ್‌ ರಾಗಿಗೆ 1,725, ಜೋಳಕ್ಕೆ 1,650 ಕನಿಷ್ಠ ಬೆಂಬಲ ಬೆಲೆ ಕೇಂದ್ರ ನಿಗದಿ ಪಡಿಸಿದ್ದು, ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಘೋಷಿಸಿಲ್ಲ ಎಂದರು. ಈಗ ಮುಕ್ತ ಮಾರುಕಟ್ಟೆಯಲ್ಲೇ ಕ್ವಿಂಟಾಲ್‌ ಭತ್ತಕ್ಕೆ 1,700, 1,800 ರೂಪಾಯಿ ಇದೆ. ಹಾಗಾಗಿ ರೈತರು ಖರೀದಿ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇಲ್ಲ.

Advertisement

ಆದರೆ, ಯಾವುದೇ ಕಾರಣಕ್ಕೂ ಕನಿಷ್ಠ ಬೆಲೆಗಿಂತ ಕಡಿಮೆ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಇರಬಾರದು ಎನ್ನುವ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ತೆರೆಯಲಾಗುತ್ತಿದೆ. ಮಾ. 31ರ ವರೆಗೆ ತೆರೆದಿರುತ್ತವೆ ಎಂದು ತಿಳಿಸಿದರು. ರಾಜ್ಯ ಉಗ್ರಾಣ ನಿಗಮ ಮತ್ತು ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಧಿ ಗಳಾಗಿವೆ.

ಈ ಏಜೆನ್ಸಿಗಳು ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯ ಗ್ರೇಡರ್‌ಗಳನ್ನು ನೇಮಿಸಬೇಕು. ಗ್ರೇಡರ್‌ಗಳೊಂದಿಗೆ ಧಾನ್ಯಗಳ ಗುಣಮಟ್ಟವನ್ನು ಪರೀಕ್ಷಿಸಲು ಮೂರನೇ ವ್ಯಕ್ತಿ ನೇಮಿಸಬೇಕು. ಸಂಬಂಧಿತ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.  ಈ ಬಾರಿ ರೈತರು ಗೋಣಿಚೀಲಗಳನ್ನು ತರುವಂತಿಲ್ಲ.

ಬದಲಾಗಿ ಏಜೆನ್ಸಿಗಳೇ 50 ಕೆ ಜಿ ಸಾಮರ್ಥ್ಯದ ಉಪಯೋಗಿಸಲ್ಪಟ್ಟ ಉತ್ತಮ ಗುಣಮಟ್ಟದ (ಪಿಡಿಎಸ್‌) ಗೋಣಿಚೀಲಗಳನ್ನು ರೈತರಿಗೆ ನೀಡುತ್ತಲೆ. ಅದೇ ಚೀಲದಲ್ಲಿಯೇ ಭತ್ತವನ್ನು ಖರೀದಿ ಕೇಂದ್ರಕ್ಕೆ ತರಬೇಕು. ಖರೀದಿ ಪ್ರಕ್ರಿಯೆ ಮುಗಿದ ನಂತರ ಭತ್ತವನ್ನು ಸ್ಥಳೀಯ ಅಕ್ಕಿ ಗಿರಣಿಯಲ್ಲಿ ಹಲ್ಲಿಂಗ್‌ ಮಾಡಿಸಿ, ಸಾರ್ವಜನಿಕರ ವಿತರಣೆಗೆ ಬಿಡುಗಡೆ ಮಾಡಲಾಗುವುದು. 

ಹಾಗಾಗಿ ಅಧಿಕಾರಿಗಳು ಚೀಲದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ ಎಂದು ತಿಳಿಸಿದರು. ಎಪಿಎಂಸಿ ಸಹಾಯಕ ನಿರ್ದೇಶಕಿ ಪಿ. ಮಂಜುಳಾದೇವಿ ಮಾತನಾಡಿ, ಭತ್ತ ಖರೀದಿಗೆ ದಾವಣಗೆರೆ, ಮಲೆಬೆನ್ನೂರು, ಸಾಗರಪೇಟೆ, ಹೊನ್ನಾಳಿಗಳಲ್ಲಿ ಹಾಗೂ ಜೋಳ ಖರೀದಿಗೆ ಹರಪನಹಳ್ಳಿ ಮತ್ತು ಜಗಳೂರಿನಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. 

ಎಲ್ಲೆಡೆ ಸಂಗ್ರಹಣೆಯನ್ನು ಉಗ್ರಾಣದಲ್ಲೇ ಮಾಡುತ್ತಿರುವುದರಿಂದ ಉಗ್ರಾಣದಲ್ಲೇ ಸಂಗ್ರಹಣೆ ಮಾಡಿದರೆ ಉತ್ತಮ ಎಂದರು. ಜಿಲ್ಲಾ ಉಗ್ರಾಣ ನಿಗಮದ ಪ್ರಾದೇಶಿಕ ಪ್ರಬಂಧಕ ತಿಮ್ಮಣ್ಣ ಮಾತನಾಡಿ, ಉಗ್ರಾಣದಲ್ಲಿ ಸಂಗ್ರಹಣೆಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ ಹಾಗೂ ಸಿಬ್ಬಂದಿ ಇನ್ನೂ ನೇಮಕವಾಗಿಲ್ಲ. ಆದಷ್ಟು ಬೇಗ ಸಿಬ್ಬಂದಿಗಳನ್ನು ನೇಮಿಸಿಕೊಂಡು ಕೆಲಸ ಆರಂಭಿಸುವುದಾಗಿ ತಿಳಿಸಿದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಧಿಕಾರಿ ಎಸ್‌. ಅಶ್ವತಿ, ಉಪ ಕಾರ್ಯದರ್ಶಿ ಜಿ. ಎಸ್‌. ಷಡಕ್ಷರಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ. ಸದಾಶಿವ, ಹರಿಹರ, ಮಲೇಬೆನ್ನೂರು, ಹೊನ್ನಾಳಿ ಮತ್ತು ದಾವಣಗೆರೆ ಉಗ್ರಾಣಗಳ ಪ್ರಬಂಧಕರು, ಎಪಿಎಂಸಿ ಕಾರ್ಯದರ್ಶಿಗಳು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next