Advertisement

6 ಪಥ ರಸ್ತೆ ಜಿಲ್ಲೆಯ ಅಭಿವೃದ್ಧಿಗೆ ಪೂರಕ

11:44 AM Jan 25, 2019 | Team Udayavani |

ಯಾದಗಿರಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗ್ರೀನ್‌ ಫೀಲ್ಡ್‌ ಭಾರತ ಮಾಲಾ ಪರಿಯೋಜನೆಯಡಿ ಜಿಲ್ಲೆಯ ಶಹಾಪುರ ಮತ್ತು ವಡಗೇರಾ ತಾಲೂಕುಗಳ ಮೂಲಕ 6 ಪಥದ ರಸ್ತೆ ಹಾಯ್ದು ಹೋಗಲಿದ್ದು, ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಅಕ್ಕಲಕೋಟದಿಂದ-ಕರ್ನಾಟಕ/ ತೆಲಂಗಾಣ ಪ್ರದೇಶದವರೆಗೆ 6 ಪಥದ ರಸ್ತೆಯನ್ನು ನಿರ್ಮಿಸುವ ಕುರಿತು ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಕ್ಕಲಕೋಟದಿಂದ ಆರಂಭವಾಗುವ ರಸ್ತೆ ಕರ್ನಾಟಕ, ತೆಲಂಗಾಣ ಗಡಿಪ್ರದೇಶದವರೆಗೆ ಇದ್ದು, ಕರ್ನೂಲ್‌ವರೆಗೆ ವಿಸ್ತರಿಸಲ್ಪಟ್ಟಿದೆ. ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. 6 ಪಥದ ರಸ್ತೆ ನಿರ್ಮಾಣ ಪ್ರಸ್ತುತ ಪ್ರಾಥಮಿಕ ಹಂತದಲ್ಲಿದ್ದು, ಭೂ ಸ್ವಾಧೀನ ಪ್ರಕಿಯೆ ಸದ್ಯಕ್ಕೆ ಇರುವುದಿಲ್ಲ. ಮುಂದೆ ಭೂ ಸ್ವಾಧೀನ ಪಡಿಸಿಕೊಳ್ಳುವಾಗ ಸಂಬಂಧಪಟ್ಟ ಪ್ರತಿಯೊಬ್ಬ ರೈತರಿಗೂ ಮಾಹಿತಿ ನೀಡಲಾಗುವುದು. ರೈತರ ಸಮ್ಮುಖದಲ್ಲಿಯೇ ಸ್ವಾಧೀನಕ್ಕೊಳಪಡುವ ಭೂ ಬೆಲೆ ನಿರ್ಧರಿಸಿ, ಸೂಕ್ತ ಪರಿಹಾರ ಒದಗಿಸಲಾಗುವುದು. ಯಾವುದೇ ಕಾರಣಕ್ಕೂ ಆತಂಕಪಡಬೇಕಾಗಿಲ್ಲ ಎಂದು ಅಭಯ ನೀಡಿದರು.

ಉತ್ತಮ ರಸ್ತೆ ಸಂಪರ್ಕದಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿ, ಆಸ್ತಿಗಳ ಬೆಲೆ ಹೆಚ್ಚಳವಾಗುತ್ತದೆ. ಜಿಲ್ಲೆಗೆ ಈಗಾಗಲೇ ರೈಲು ಸಂಪರ್ಕ ಇದೆ. ಅಲ್ಲದೆ, ವಾಡಿ-ಗದಗ ರೈಲು ಸಂಪರ್ಕ ಕಾರ್ಯ ನಡೆಯುತ್ತಿದೆ. ಈಗ 6 ಪಥದ ರಸ್ತೆ ನಿರ್ಮಾಣದಿಂದ ಜಿಲ್ಲೆಯ ಜನತೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

ಸಹಾಯಕ ಆಯುಕ್ತ ಡಾ| ಬಿ.ಎಸ್‌. ಮಂಜುನಾಥ ಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 6 ಪಥದ ರಸ್ತೆ ನಿರ್ಮಾಣಕ್ಕಾಗಿ 680 ಹೆಕ್ಟೇರ್‌ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಇದೆ. ರಸ್ತೆಯ ಅಗಲ 230 ಫೀಟ್ ಇರುತ್ತದೆ ಎಂದು ಮಾಹಿತಿ ನೀಡಿದರು.

Advertisement

ಜಿಲ್ಲೆಯಲ್ಲಿ 64 ಕಿ.ಮೀಟರ್‌ ರಸ್ತೆ: ಅಕ್ಕಲಕೋಟದಿಂದ-ಕರ್ನಾಟಕ/ ತೆಲಂಗಾಣ ಪ್ರದೇಶದವರೆಗೆ ನಿರ್ಮಿಸುತ್ತಿರುವ 6 ಪಥದ ರಸ್ತೆಯ ಉದ್ದ 203 ಕಿ.ಮೀಟರ್‌ ಇದ್ದು, ಅಂದಾಜು ವೆಚ್ಚ 7,567 ಕೋಟಿ ರೂ.ಗಳಲ್ಲಿ ನಿರ್ಮಾಣ ನಡೆಯಲಿದೆ. ಯಾದಗಿರಿ ಜಿಲ್ಲೆಯಲ್ಲಿ 64.9 ಕಿ.ಮೀಟರ್‌ ಉದ್ದದ ಅಂದಾಜು ವೆಚ್ಚ 1,735 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಭೂಮಿ ಸರ್ವೇ ಇನ್ನೂ ಆಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಪ ವ್ಯವಸ್ಥಾಪಕ ಪ್ರದೀಪ್‌ ಹಿರೇಮಠ ಹಾಗೂ ಆರ್‌.ವಿ. ಅಸೋಸಿಯೇಟ್ಸ್‌ನ ಪಿ.ವಿ. ರತ್ನಕುಮಾರ ವಿವರಿಸಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್‌, ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸಿಒಪಿ ಪರ್ಥಾಡೊ, ಸಹಾಯಕ ಸಲಹೆಗಾರ ಶಶಿಕಾಂತ ದಂಡೋತಿ ಇದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇರುವ ಸ್ವಲ್ಪ ಜಮೀನಿನಲ್ಲಿ ಜೀವನ ನಡೆಸುತ್ತಿದ್ದೇವೆ. ರಸ್ತೆ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಂಡರೆ ರೈತರು ಬೀದಿಗೆ ಬರಬೇಕಾಗುತ್ತದೆ. ಹಾಗಾಗಿ ಸೂಕ್ತ ಪರಿಹಾರದ ಜೊತೆಗೆ ಜಮೀನು ಕಳೆದುಕೊಂಡ ರೈತರ ಕುಟುಂಬಕ್ಕೆ ಸರ್ಕಾರ ಉದ್ಯೋಗ ಒದಗಿಸಿಕೊಡಲು ಮುಂದಾಗಬೇಕು. ಅಲ್ಲದೇ ಈ ಗ್ರಾಮಗಳನ್ನು ದತ್ತು ಪಡೆದು ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಸಂಗನಗೌಡ ಅಣಬಿ, ರೈತ

ಜಿಲ್ಲೆಯ ಶಹಾಪುರ ಮತ್ತು ವಡಗೇರಾ ತಾಲೂಕಿನ 21 ಹಳ್ಳಿಗಳ ಮೂಲಕ ಹಾದು ಹೋಗಲಿರುವ ರಸ್ತೆ, ಶಹಾಪುರ ತಾಲೂಕಿನ ಅಣಬಿ, ಶಿರವಾಳ, ಹುರಸಗುಂಡಗಿ, ಬಿದ್ರಾಣಿ, ಇಬ್ರಾಹಿಂಪುರ, ಚಟ್ನಳ್ಳಿ, ಕರಣಗಿ, ಖಾನಾಪುರ, ಮಂಗಿನಹಳ್ಳಿ ಹಾಗೂ ವಡಗೇರಾ ತಾಲೂಕಿನ ನಾಯ್ಕಲ್‌, ಮಲಹಳ್ಳಿ, ಕುರಕುಂದಾ, ಉಳ್ಳೆಸೂಗೂರ, ವಡಗೇರಾ, ಕೋನಹಳ್ಳಿ, ಬಿಳಾØರ, ರೋಟ್ನಡಗಿ, ಕದ್ರಾಪುರ, ಬೆಂಡೆಬೆಂಬಳಿ, ಕೋಡಾಲ್‌, ಗೋನಾಳ ಮೂಲಕ ರಸ್ತೆ ಹಾದು ಹೋಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next