Advertisement

ಎಸಿಪಿ ಬೆಂಬಲಿಸಿ ನಾಗರಿಕ ಸಂಘಟನೆಗಳ ಪ್ರತಿಭಟನೆ

01:27 PM Nov 23, 2017 | |

ಬೆಂಗಳೂರು: ಜೆ.ಸಿ.ನಗರ ಎಸಿಪಿ ಮಂಜುನಾಥ್‌ ಬಾಬು ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶೆಟ್ಟಿ ಲಂಚ್‌ ಹೋಂ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆಯೇ ಹೊರತು ಬೇರೆ ಯಾವುದೇ ದುರುದ್ದೇಶದಿಂದ ಅಲ್ಲ. ವಿನಾ ಕಾರಣ ಹೋಟೆಲ್‌ ಮಾಲೀಕ ರಾಜೀವ್‌ ಶೆಟ್ಟಿ ಎಸಿಪಿ ವಿರುದ್ಧ ದೂರುತ್ತಿದ್ದಾರೆ ಎಂದು ಆರೋಪಿಸಿ ಹೆಬ್ಟಾಳ ವಿಧಾನಸಭಾ ನಾಗರಿಕ ಸಂಘ ಮತ್ತು ಕರ್ನಾಟಕ ರಕ್ಷಣ ವೇದಿಕೆ(ಪ್ರವೀಣ್‌ ಶೆಟ್ಟಿ ಬಣ) ಸೇರಿದಂತೆ ನೂರಾರು ಕಾರ್ಯಕರ್ತರು ಬುಧವಾರ ಎಸಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗೆ 11 ಗಂಟೆ ಸುಮಾರಿಗೆ ಎಸಿಪಿ ಕಚೇರಿ ಎದುರು ಜಮಾಯಿಸಿದ್ದ ಸುಮಾರು 400ಕ್ಕೂ ಅಧಿಕ ಸಾರ್ವಜನಿಕರು ಹೋಟೆಲ್‌ ಮಾಲೀಕ ರಾಜೀವ್‌ ಶೆಟ್ಟಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಘೋಷಣೆ ಕೂಗಿದರು. ಎಸಿಪಿ ಮಂಜುನಾಥ್‌ ಬಾಬು ದಕ್ಷ ಅಧಿಕಾರಿಯಾಗಿದ್ದು, ಹೋಟೆಲ್‌ ಮಾಲೀಕ ರಾಜೀವ್‌ ಶೆಟ್ಟಿ ಪೇದೆಗೆ ಏಕವಚನದಲ್ಲಿ
ಸಂಭೋದಿಸಿದ್ದರಿಂದ ಕೋಪಗೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಆ ರೀತಿ ನಡೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಇನ್ನು ಭೂಗತ ಪಾತಕಿ ರವಿಪೂಜಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿ ಹೋಟೆಲ್‌ ಮುಚ್ಚುವಂತೆ ಬೆದರಿಕೆ ಹಾಕುತ್ತಿದ್ದಾರೆ. ಈ ಕೃತ್ಯದ ಹಿಂದೆ ಎಸಿಪಿ ಮಂಜುನಾಥ್‌ ಬಾಬು ಇದ್ದಾರೆ ಎಂದು ರಾಜೀವ್‌ ಶೆಟ್ಟಿ ಆರೋಪಿಸುತ್ತಿರುವುದು ಸರಿಯಲ್ಲ. ಮಂಜುನಾಥ್‌ ಬಾಬು ಪ್ರಾಮಾಣಿಕ ಅಧಿಕಾರಿಯಾಗಿದ್ದು, ಸಾರ್ವಜನಿಕರ ಕುಂದುಕೊರತೆಗಳಿಗೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ.

ಇಂತಹ ಅಧಿಕಾರಿ ವಿರುದ್ಧ ಇಲ್ಲದ ಆರೋಪ ಸೂಕ್ತವಲ್ಲ. ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಹಲ್ಲೆಯ ಹಿಂದಿನ ಸತ್ಯಾಸತ್ಯತೆಯನ್ನು ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಬಹಿರಂಗ ಪಡಿಸಬೇಕು. ಅಷ್ಟೇ ಅಲ್ಲದೇ, ಮಂಜುನಾಥ್‌ ಬಾಬು ವಿರುದ್ಧ ಯಾವುದೇ ಕಾನೂನು ಕ್ರಮಕೈಗೊಳ್ಳದೆ, ಸದ್ಯ ಇರುವ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.

ಡಿಸಿಪಿಗೆ ಮನವಿ: ಎಸಿಪಿ ಮಂಜುನಾಥ್‌ ಬಾಬು ಪರನೂರಾರು ಹೋರಾಟಗಾರರು ರಸ್ತೆಗಳಿದ ಪರಿಣಾಮ
ಸ್ಥಳಕ್ಕೆ ಧಾವಿಸಿ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ಗೆ ಪ್ರತಿಭಟನಾಕಾರರು ಎಸಿಪಿ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಮನವಿ ಪತ್ರ ನೀಡಿದರು. ರಾಜೀವ್‌ ಶೆಟ್ಟಿಗೆ ಬಂದ ಪ್ರಾಣಬೆದರಿಕೆ ಕರೆ ಹಿಂದೆ ಎಸಿಪಿ ಮಂಜುನಾಥ್‌ ಬಾಬು ಇದ್ದಾರೆ ಎಂಬ ಆರೋಪ ಸುಳ್ಳ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

ಇದಕ್ಕೂ ಮೊದಲು ಮಾತನಾಡಿದ ಸಂಘದ ಸಂಚಾಲಕ ರವಿಶಂಕರ್‌ ಶೆಟ್ಟಿ, ಘಟನೆಗೂ ಮುನ್ನ ಎಸಿಪಿ ಮಂಜುನಾಥ್‌ ಬಾಬು ಹೊಟೇಲ್‌ ಬಳಿ ತೆರಳುವ ಮುನ್ನವೇ ಇಬ್ಬರು ಪಿಸಿ ಹೊಟೇಲ್‌ ಮುಚ್ಚುವಂತೆ ತಿಳಿಸಿದ್ದರು. ನ.10 ರಂದು ಟಿಪ್ಪು
ಜಯಂತಿ ಹಿನ್ನೆಲೆ ಭದ್ರತೆ ಕೈಗೊಂಡಿದ್ದ ಎಸಿಪಿ ರಾತ್ರಿ ವೇಳೆ ಬೀಟ್‌ಗೆ ತೆರಳಿದ್ದರು. ಈ ವೇಳೆ ಹೋಟೆಲ್‌ ತೆರದಿರುವುದು ಗಮನಕ್ಕೆ ಬಂದಿತ್ತು. ಬಾರ್‌ ಪಕ್ಕವೇ ಹೊಟೇಲ್‌ ಇದ್ದುದರಿಂದ ಮುಚ್ಚು ವಂತೆ ಹೇಳಿದ್ದಾರೆ.

ಆಗ ಪೇದೆ ಜತೆ ರಾಜೀವ್‌ ಶೆಟ್ಟಿ ಅನುಚಿತವಾಗಿ ವರ್ತಿಸಿದ್ದರಿಂದ ಎಸಿಪಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವುದಾಗಿ ಹೇಳಿದರು.

ಕರವೇ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಮಾತನಾಡಿ, ಎಸಿಪಿ ಮಂಜುನಾಥ್‌ ಬಾಬು ದಕ್ಷ ಅಧಿಕಾರಿ. ಅವರ ಮೇಲೆ ಮಾಡಿರುವ ಆರೋಪ ಸರಿಯಿಲ್ಲ. ಒಂದು ವೇಳೆ ಆವರಿಗೆ ನ್ಯಾಯ ಸಿಗದಿದ್ದರೆ ನಗರ ಪೊಲೀಸ್‌ ಇಲಾಖೆ ಆಯುಕ್ತರಿಗೆ ದೂರು ನೀಡಲಾಗುವುದು. 

ಅಲ್ಲಿಯೂ ಸಹ ನ್ಯಾಯ ಸಿಗದಿದ್ದರೆ ಹೆಬ್ಟಾಳ ಬಂದ್‌ ಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಿವೃತ್ತ ಕರ್ನಲ್‌ ವಾಸುದೇವ ರಾವ್‌ ಮಾತನಾಡಿ, ಎಸಿಪಿ ಮಂಜುನಾಥ್‌ ಬಾಬು ವಿರುದ್ಧ ಇದುವರೆಗೂ ಯಾವುದೇ ಆರೋಪಗಳಿಲ್ಲ. ರಾಜೀವ್‌ ಶೆಟ್ಟಿ ಕೋಪಗೊಂಡು ಆತುರದ ನಿರ್ಧಾರ ತೆಗೆದುಕೊಳ್ಳುವ ಬದಲು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next