ಬೆಂಗಳೂರು: ಅನ್ಯ ಭಾಷೆಗಳ ಉತ್ತಮ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ಚಿತ್ರೋದ್ಯಮದ ತೀವ್ರ ವಿರೋಧದ ನಡುವೆಯೂ ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಡಬ್ಬಿಂಗ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಉತ್ತಮ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿದರೆ ಕನ್ನಡ ಭಾಷಾ ಚಿತ್ರಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅದರ ಬದಲು ಕನ್ನಡಿಗರು ಇತರೆ ಭಾಷೆಗಳಲ್ಲಿ ಬಂದಿರುವ ಉತ್ತಮ ಚಿತ್ರಗಳನ್ನು ತಮ್ಮ ಭಾಷೆಯಲ್ಲಿ ನೋಡಿದಂತಾಗುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿರುವ ಶ್ರೀವಲ್ಲಿ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಬ್ಬಿಂಗ್ ಬಂದರೆ ಚಿತ್ರಗಳಿಗೆ ಉತ್ತಮ ಆದಾಯ ಬರುಕತ್ತದೆ. ಜನರೂ ಒಳ್ಳೆಯ ಚಿತ್ರಗಳನ್ನು ಇಷ್ಟಪಟ್ಟು ನೋಡುತ್ತಾರೆ ಎಂದರು.
60-70ರ ದಶಕದಲ್ಲೇ ವರನಟ ಡಾ.ರಾಜ್ ಕುಮಾರ್ ಅವರು ಡಬ್ಬಿಂಗ್‌ಗೆ ವಿರೋಧ ವ್ಯಕ್ತಪಡಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ, ಆಗಿನ ಕಾಲಘಟ್ಟಕ್ಕೂ, ಈಗಿನ ಕಾಲಘಟ್ಟಕ್ಕೂ ವ್ಯತ್ಯಾಸವಿದೆ. ಈಗ ಅವರು ಇದ್ದು, ಬಾಹುಬಲಿಯಂತಹ ಚಿತ್ರಗಳನ್ನು ನೋಡಿದ್ದರೆ ಡಬ್ಬಿಂಗ್‌ಗೆ ಒಪ್ಪಿಗೆ ಕೊಡುತ್ತಿದ್ದರೇನೋ ಎಂದು
ಹೇಳಿದರು.