ಇಂಡಿ: ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿ ರೈತರಿಗೆ ತೊಂದರೆಯಾಗುತ್ತಿದೆ. ಪ್ರತಿ ದಿನ ಸರಿ ಸುಮಾರು 7 ಗಂಟೆ ವಿದ್ಯುತ್ ಪೂರೈಸಬೇಕಾದ ಇಲಾಖೆ 4-5 ಗಂಟೆ ಮಾತ್ರ ವಿದ್ಯುತ್ ಪೂರೈಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಹಿಂಗಾರು ಬೆಳೆಗಳಾದ ಜೋಳ, ಗೋಧಿ, ಕಡಲೆ, ತೊಗರಿ ತೋಟಗಾರಿಕೆ ಬೆಳೆಗಳಾದ ಬಾಳೆ, ನಿಂಬೆ, ದ್ರಾಕ್ಷಿ, ದಾಳಿಂಬೆ, ಕಬ್ಬು ಸೇರಿದಂತೆ ಎಲ್ಲ ಫಸಲು ಬಂದಿದ್ದು ರೈತರು ಫಸಲಿಗೆ ನೀರು ಬಿಡಬೇಕಾಗುತ್ತದೆ. ಕೊಳವೆ ಬಾವಿ, ತೆರೆದ ಬಾವಿ, ಕೃಷ್ಣಾ ಕಾಲುವೆ ಮೂಲಕ ಇಲ್ಲವೆ ಭೀಮಾ ನದಿ ತೀರದಲ್ಲಿ ಹೊಲಗಳಿಗೆ ನೀರು ಬಿಡಬೇಕು. ಆದರೆ ಅಸಮರ್ಪಕ ಸಮಯದಲ್ಲಿ ವಿದ್ಯುತ್ ವಿತರಣೆ ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿವೆ. ಈಗ ಚಳಿಗಾಲ ಆರಂಭವಾಗಿದ್ದು ಹೀಗಾಗಿ ಹಗಲು ಹೊತ್ತಿನಲ್ಲೇ 7 ಘಂಟೆ ವಿದ್ಯುತ್ ಪೂರೈಸಬೇಕೆಂಬುದು ರೈತರ ಆಶಯವಾಗಿದೆ.
ಸದ್ಯ ವಿದ್ಯುತ ವಿತರಣೆ ಹಗಲು ವೇಳೆ 3 ಗಂಟೆ ಮತ್ತು ರಾತ್ರಿ ವೇಳೆ 4 ಗಂಟೆ ಮಾಡುತ್ತಾರೆ. ಹಗಲು ವೇಳೆ ಒಂದು ವಾರ ಬೆಳಗ್ಗೆ 6ರಿಂದ 9 ಗಂಟೆಗೆ, ಮತ್ತೊಂದು ವಾರ 9ರಿಂದ 12 ಗಂಟೆಗೆ, ಮತ್ತೊಂದು ವಾರ 12ರಿಂದ 3 ಗಂಟೆವರೆಗೆ ವಿತರಣೆ ಮಾಡುತ್ತಿದ್ದಾರೆ. ಆದರೆ ರಾತ್ರಿ ವೇಳೆ ಮಾತ್ರ 10ರಿಂದ 2 ಗಂಟೆಯವರೆಗೆ ಬಿಡುತ್ತಾರೆ. ಹೀಗಾಗಿ ರೈತರು ಹಗಲು ಮತ್ತು ರಾತ್ರಿ ಎನ್ನದೆ ಬೆಳಗ್ಗೆ ನೀರು ಬಿಡುವ ಪರಿಸ್ಥಿತಿ ಬಂದೊದಗಿದೆ. ಕಾರಣ ರಾತ್ರಿ 4 ಗಂಟೆ ಕೊಡುವ ವಿದ್ಯುತ್ ವಿತರಣೆ ಹಗಲಿನಲ್ಲಿಯೇ 3 ತಾಸಿಗಿಂತಲೂ ಹೆಚ್ಚು ನೀಡಿ ರಾತ್ರಿ 10ರಿಂದ ನೀಡುವ ವೇಳೆ ಕಡಿಮೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ.
ರೈತರು ಇಲಾಖೆಯವರಿಗೆ ಕೇಳಿದರೆ ಇದು ನಮಗೆ ಮೇಲಿನಿಂದ ಬಂದ ಆದೇಶವಾಗಿರುತ್ತದೆ. ಇಲಾಖೆ ಪಾಲನೆ ಮಾಡಲೇಬೇಕು. ಸಮಯ ಬದಲಾವಣೆ ಮಾಡಲು ಸಾಧ್ಯವಾಗಲ್ಲ ಎನ್ನುತ್ತಾರೆ. ಒಂದು ಕಡೆ ರೈತರಿಗೆ ಮಳೆಯಾಗದೇ ತೊಂದರೆಯಾಗುತ್ತಿದ್ದರೆ ಇನ್ನೊಂದೆಡೆ ಸರಿಯಾದ ಸಮಯದಲ್ಲಿ ವಿದ್ಯುತ್ ವಿತರಣೆ ಮಾಡದೇ ಇರುವುದರಿಂದ ಅನ್ನದಾತ ಅಳಲು ಹೇಳತೀರದಾಗಿದೆ.
ನಾವು ಹಗಲಿನಲ್ಲಿಯೂ ನೀರು ಬೀಡಬೇಕು. ಮತ್ತೆ ರಾತ್ರಿಯೂ 10ರಿಂದ 2ರವರೆಗೆ ನೀರು ಬಿಡಬೇಕು. ಛಳಿಗಾಲ ಆರಂಭವಾಗಿದ್ದು ರಾತ್ರಿ ಹೊತ್ತು ಛಳಿ ಇರುತ್ತದೆ. ರಾತ್ರಿ ನಿದ್ರೆಯಾಗದೆ ಮತ್ತೆ ಹಗಲಿನಲ್ಲಿ ಕೆಲಸ ಮಾಡುವದು ತೊಂದರೆಯಾಗುತ್ತಿದೆ.
-ಶ್ರೀಶೈಲ ಕುಂಬಾರ, ರೈತ ಇಂಗಳಗಿ
-ಯಲಗೊಂಡ ಬೇವನೂರ