ವಿಟ್ಲ: ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ವಿತರಿಸುವ ಅರಣ್ಯ ಇಲಾಖೆ ಯೋಜನೆ ಮಹಿಳೆಯರ ಆರೋಗ್ಯ ಹಾಗೂ ಪರಿಸರ ರಕ್ಷಣೆಗೆ ಪೂರಕವಾಗಿದೆ. ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಈ ಮಹತ್ವದ ಸೌಲಭ್ಯ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಅರಣ್ಯ ಇಲಾಖೆ ವಿಶೇಷ ಘಟಕ ಯೋಜನೆಯಡಿ ವೀರಕಂಭ, ಪೆರಾಜೆ, ಮಾಣಿ, ಅನಂತಾಡಿ, ವಿಟ್ಲಪಟ್ನೂರು ಮತ್ತು ನೆಟ್ಲಮುಟ್ನೂರು ಗ್ರಾಮಗಳ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವರು ಉಚಿತ ಎಲ್‌ಪಿಜಿ ಗ್ಯಾಸ್ ಸ್ಟವ್, ಸಿಲಿಂಡರ್ ವಿತರಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಕೆಡಿಪಿ ಸದಸ್ಯೆ ಜಯಂತಿ ಎಸ್. ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಮಂಜುಳಾ ಕುಶಲ ಪೆರಾಜೆ, ಶೋಭಾ ರೈ, ಆದಂ ಕುಂಞಿ ಕೆದಿಲ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ ಎಂ., ನೆಟ್ಲಮುಟ್ನೂರು ಗ್ರಾ.ಪಂ.ಅಧ್ಯಕ್ಷೆ ವಿಜಯ ಉಪಸ್ಥಿತರಿದ್ದರು. ಕೃಷಿ ಇಲಾಖೆಯಿಂದ ರೈತರಿಗೆ ಟಿಲ್ಲರ್ ವಿತರಿಸಲಾಯಿತು.
ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ. ಸುರೇಶ್ ಪ್ರಸ್ತಾವನೆಗೈದರು. ಮಂಗಳೂರು ವಿಭಾಗದ ಎಸಿಎಫ್ ಸತೀಶ್‌ಬಾಬು ರೈ ಸ್ವಾಗತಿಸಿದರು. ಜನಾರ್ದನ ಪೂಜಾರಿ ಕೊಡಂಗೆ ಆಶಯಗೀತೆ ಹಾಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಗ್ರಾ.ಪಂ. ಸದಸ್ಯ ಸುದೀಪ್ ಕುಮಾರ್ ಶೆಟ್ಟಿ ಸಹಕರಿಸಿದರು.