ಮಹಾನಗರ: ತುಳು ಚಲನಚಿತ್ರ ನಿರ್ಮಾಪಕರ ಸಂಘದ ವತಿಯಿಂದ ಆಯೋಜಿಸಲಾದ ತುಳು ಚಲನಚಿತ್ರರಂಗದ ಮೊದಲ ಪ್ರತಿಷ್ಠಿತ ‘ತುಳು ಫಿಲ್ಮ್ ಫೆಸ್ಟಿವಲ್-2018’ ಕಾರ್ಯಕ್ರಮಕ್ಕೆ ಗುರುವಾರ ಮಂಗಳೂರು ಪುರಭವನದಲ್ಲಿ ಚಾಲನೆ ದೊರೆಯಿತು. ಮಂಗಳೂರಿನ ಸಿನಿಪೊಲಿಸ್ ಥಿಯೇಟರ್ ಹಾಗೂ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಶುಕ್ರವಾರದಿಂದ ಜ. 11ರ ವರೆಗೆ ಚಿತ್ರೋತ್ಸವ ಆಯೋಜಿಸಲಾಗಿದೆ.
ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಅವರು ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ತುಳುವಿನಲ್ಲಿ ಹಲವು ಸಿನೆಮಾಗಳು ಪ್ರಸ್ತುತ ಯಶಸ್ವಿಯಾಗಿ ತುಳುನಾಡಿನ ಪ್ರೀತಿಗೆ ಪಾತ್ರವಾಗಿದ್ದು, ಇನ್ನಷ್ಟು ಸಂದೇಶ ಹೊಂದಿರುವ ಸಿನೆಮಾಗಳ ಮೂಲಕ ಕೋಸ್ಟಲ್‌ವುಡ್ ಇನ್ನಷ್ಟು ಪ್ರಕಾಶಮಾನವಾಗಲಿ ಎಂದು ಆಶಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಂಗಳೂರು ಮೇಯರ್ ಕವಿತಾ ಸನಿಲ್ ಮಾತನಾಡಿ, ಹಿಂದಿನ ತುಳು ಸಿನೆಮಾಗಳ ಬಗ್ಗೆ ಪರಾಮರ್ಶಿಸಿದಾಗ ಅಂದಿನ ಸಿನೆಮಾ ಶ್ರೀಮಂತಿಕೆ ಹಾಗೂ ಪ್ರೀತಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಹಿಂದಿನ ತುಳು ಸಿನೆಮಾಗಳ ಒಂದೊಂದು ಹಾಡುಗಳು ಕೂಡ ಇಂದು ಕೂಡ ಜನರ ಬಾಯಲ್ಲಿ ನಲಿದಾಡುತ್ತಿವೆ. ಪರಶುರಾಮನ ಕುಡರಿಗ್ ಪುಟ್ಟಿನ ತುಳುನಾಡ್, ಉಪ್ಪು ನೀರ್ ಅಂಚಿಗ್.., ಹೀಗೆ ಒಂದೊಂದು ಅಂದಿನ ಚಿತ್ರಗಳ ಹಾಡುಗಳು ಈಗ ರೋಮಾಂಚನ ಉಂಟುಮಾಡುತ್ತವೆ. ಇಂತಹ ಸಮೃದ್ಧತೆ ಮುಂದಿನ ಸಿನೆಮಾದಲ್ಲೂ ಅಜರಾಮರವಾಗಿ ಇರಬೇಕು ಎಂದು ಆಶಿಸಿದರು.
ತೆಲುಗು ಚಿತ್ರನಟ ಸುಮನ್, ಪ್ರಮುಖರಾದ ದಿವಾಕರ್, ಯಜ್ಞೇಶ್ ಬರ್ಕೆ, ಹಲವು ಚಿತ್ರ ನಿರ್ಮಾಪಕರು, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ ಮತ್ತಿತರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸಚಿನ್ ಎಸ್. ಉಪ್ಪಿನಂಗಡಿ ಸ್ವಾಗತಿಸಿದರು. ಸುದೇಶ್ ಭಂಡಾರಿ ಕಿನ್ನಿಮಜಲುಬೀಡು ವಂದಿಸಿದರು. ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.
ಆಯ್ದ ಸಿನೆಮಾಗಳ ಪ್ರದರ್ಶನ
ತುಳು ಚಲನಚಿತ್ರೋತ್ಸವದಲ್ಲಿ ಸಿನೆಮಾಗಳು ಶುಕ್ರವಾರದಿಂದ ಆರಂಭವಾಗಿವೆ. ಒಟ್ಟು 49 ತುಳು ಸಿನೆಮಾಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ 24 ಹೊಸ ಸಿನೆಮಾಗಳು ಸಿನಿಪೊಲಿಸ್ ಹಾಗೂ ಉಳಿದ 25 ಹಳೆಯ ಸಿನೆಮಾಗಳು ಡಾನ್‌ಬಾಸ್ಕೋ ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿವೆ. ಈ ಎಲ್ಲ ಸಿನೆಮಾ ಪ್ರದರ್ಶನಗೊಳ್ಳುವ ಮೊದಲು 20 ನಿಮಿಷ ಉದ್ಘಾಟನೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ತುಳುವಿನಲ್ಲಿ 1973ರಲ್ಲಿ ತೆರೆ ಕಂಡ 5ನೇ ಸಿನೆಮಾ ‘ಉಡಲ್ದ ತುಡರ್’ನಿಂದ ಆರಂಭವಾಗಿ ಕಳೆದ ನವೆಂಬರ್‌ನಲ್ಲಿ ತೆರೆಕಂಡ ತುಳುವಿನ 85ನೇ ‘ರಂಗ್ ರಂಗ್‌ದ ದಿಬ್ಬಣ’ ಸಿನೆಮಾದವರೆಗಿನ ಆಯ್ದ 49 ಸಿನೆಮಾಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.