Advertisement

ಕ್ಷೇತ್ರದ ಅಭಿವೃದ್ಧಿಗೆ ಪೂರಕ ಸ್ಪಂಧನೆ : ಶೋಭಾ ಕರಂದ್ಲಾಜೆ  

12:30 AM Mar 23, 2019 | |

ಕಾಪು: ಸಂಸದರ ನಿಧಿ ಹಂಚಿಕೆ, ಅನುದಾನ ಬಳಕೆ, ಕಾರ್ಯಕರ್ತರ ಭೇಟಿ ಮತ್ತು ಪ್ರವಾಸ ನಿಗದಿ ಸಹಿತ ಹಲವು ವಿಚಾರಗಳಲ್ಲಿ ನಮ್ಮಿಂದ ತಪ್ಪುಗಳಾಗಿವೆ. ಅದು ನನ್ನ ಗಮನಕ್ಕೂ ಬಂದಿದ್ದು, ನಿಮ್ಮ ಆಶಯಗಳಿಗೆ ಪೂರಕವಾಗಿ ಸ್ಪಂದಿಸಲು ಸಾಧ್ಯವಾಗದೇ ಇರುವುದಕ್ಕೆ ವಿಷಾದಿಸುತ್ತೇನೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಕಾಪು ಕ್ಷೇತ್ರ ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಮತ್ತು ಚುನಾವಣೆ ನಿರ್ವಹಣಾ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಐದು ವರ್ಷಗಳಲ್ಲಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳು ನಡೆದಿವೆ. ಆದರೆ ಅದನ್ನು ಸಮರ್ಪಕವಾಗಿ ಹಂಚಿಕೆ ಮಾಡಿಕೊಡುವಲ್ಲಿ ಮತ್ತು ಜನರಿಗೆ ತಲುಪಿಸುವಲ್ಲಿ ನಾವು ವಿಫಲರಾಗಿದ್ದೇವೆ. ಮುಂದೆ ಎರಡೂ ಜಿಲ್ಲೆಗಳ ಗ್ರಾಮ ಮಟ್ಟದ ಸಮಿತಿಗಳಿಂದ ಹಿಡಿದು ಶಕ್ತಿ ಕೇಂದ್ರಗಳು, ಮಂಡಲ, ತಾಲೂಕು, ಜಿಲ್ಲಾ ಸಮಿತಿ, ಶಾಸಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರೊಂದಿಗೆ ಚರ್ಚಿಸಿಯೇ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು.

ನೋವು ಮರೆತು ಚುನಾವಣೆ ಎದುರಿಸೋಣ  ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈವರೆಗಿನ ಎಲ್ಲಾ ನೋವುಗಳನ್ನೂ ಮರೆತು ಮುಂದಿನ ಚುನಾವಣೆಗೆ ಸಿದ್ಧರಾಗಬೇಕು. ಇದು ಕೇವಲ ಶೋಭಾ ಕರಂದ್ಲಾಜೆಯ ಭವಿಷ್ಯಕ್ಕಾಗಿ ನಡೆಯುವ ಚುನಾವಣೆಯಲ್ಲ. ಇದು ರಾಷ್ಟ್ರದ ಹಿತ ಮತ್ತು ಭವಿಷ್ಯಕ್ಕಾಗಿ ನಡೆಯುವ ಚುನಾವಣೆಯಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಗೂಡಿ, ಮೋದಿಯವರನ್ನು ಮತ್ತೂಮ್ಮೆ ಗೆಲ್ಲಿಸುವ ಸಂಕಲ್ಪದೊಂದಿಗೆ ಚುನಾವಣೆಗೆ ಅಣಿಯಾಗ ಬೇಕಿದೆ ಎಂದರು.

ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಕಡೆಗಣಿಸಬೇಡಿ 
ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿಲ್ಲ. ಆದರೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಪ್ರಮೋದ್‌ ಮಧ್ವರಾಜ್‌ ಅವರು ಕಣಕ್ಕಿಳಿಯುವುದು ಖಚಿತವಾಗಿದ್ದು ಆ ಕಾರಣದಿಂದಾಗಿ ಚುನಾವಣಾ ಕಣವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಈ ಸರಕಾರದಿಂದ ಯಾವುದೇ ಸಾಧನೆಗಳಾಗದಿದ್ದರೂ, ಹಿಂದಿನ ಸರಕಾರದ ಸಾಧನೆಗಳನ್ನು ಇಟ್ಟುಕೊಂಡು ಮತಯಾಚನೆಗೆ ಇಳಿಯುವ ಸಾಧ್ಯತೆಗಳಿವೆ. ಆ ಕಾರಣದಿಂದಾಗಿ ಚುನಾವಣೆಯನ್ನು ಯಾರು ಕೂಡಾ ಹಗುರವಾಗಿ ತೆಗೆದುಕೊಳ್ಳದೇ ಎಂದಿನ ಶೈಲಿಗಿಂತಲೂ ಭಿನ್ನವಾದ ರೀತಿಯಲ್ಲಿ ಸಂಘಟಿತರಾಗಿ ನಾವು ಮತಬೇಟೆಗೆ ಇಳಿಯಬೇಕಿದೆ ಎಂದರು.

Advertisement

ಮೋದಿ ವಿರುದ್ಧ ಹಲವು ರಾಷ್ಟ್ರಗಳ ಪಿತೂರಿ 
ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯನ್ನಾಗುವುದನ್ನು ತಪ್ಪಿಸಲು ದೇಶದ ಹೊರಗೂ ತಂತ್ರಗಾರಿಕೆ ನಡೆಯುತ್ತಿದೆ. ಅರಬ್‌ ರಾಷ್ಟ್ರಗಳು, ಕ್ರಿಶ್ಚಿಯನ್‌ ರಾಷ್ಟ್ರಗಳು, ಮೂಲಭೂತವಾದಿಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಈ ಬಗ್ಗೆ ಸಂಚು ನಡೆಯುತ್ತಿದ್ದು, ದೇಶದಲ್ಲಿರುವ ಮೋದಿ ವಿರೋದಿ ರಾಜಕೀಯ ಪಕ್ಷಗಳು ಮತ್ತು ನಾಯಕರುಗಳ ಮೂಲಕ ಪಿತೂರಿ ನಡೆಯುತ್ತಿದೆ. ಈ ಪಿತೂರಿಯನ್ನು ವಿಫಲಗೊಳಿಸಿ, ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸುವುದು ನಮ್ಮ ಸಂಕಲ್ಪವಾಗಲಿ ಎಂದರು.

ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಮತ್ತೂಮ್ಮೆ ಗೆಲ್ಲಿಉಸವ ಮೂಲಕ ನಾವು ಮೋದಿಯವರನ್ನು ಗೆಲ್ಲಿಸಬೇಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ದೊರಕಿದ್ದ 28 ಸಾವಿರ ಮತಗಳ ಅಂತರವನ್ನು 50 ಸಾವಿರಕ್ಕೆ ಏರಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಶೀಲರಾಗಬೇಕಿದೆ. ಯಾವುದೇ ಅಸಮಾಧಾನ, ಅಸಹನೆಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ ಎಂದರು.ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಉದಯಕುಮಾರ್‌ ಶೆಟ್ಟಿ, ಸಂಧ್ಯಾ ರಮೇಶ್‌, ಜಿಲ್ಲಾ ಉಪಾಧ್ಯಕ್ಷ ಸುರೇಶ್‌ ಪಿ. ಶೆಟ್ಟಿ ಗುರ್ಮೆ, ಜಿಲ್ಲಾ ಪ್ರ. ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟಿ, ಕಾಪು ಕ್ಷೇತ್ರ ಉಸ್ತುವಾರಿ ವಿಜಯ್‌ ಕೊಡವೂರು ಉಪಸ್ಥಿತರಿದ್ದರು.

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುರಳೀಧರ ಪೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next