Advertisement

ಮೊದಲ ಗಂಡನ ಕೊಲೆಗೆ ಸುಪಾರಿ!

12:40 AM Dec 18, 2019 | Team Udayavani |

ಬೆಂಗಳೂರು: ಮೊದಲ ಗಂಡನನ್ನು ಕೊಲ್ಲಲು ಸುಪಾರಿ ನೀಡಿದ ಹೆಂಡ್ತಿ! ಕೊಲೆಯತ್ನ ಪ್ರಕರಣದ ಬಂಧಿತರಿಂದ ಹೊರಬಿತ್ತು ಸರಚೋರ ಕೃತ್ಯಗಳ ಸರಮಾಲೆ… ಇಂತಹದ್ದೊಂದು ರೋಚಕ ಪ್ರಕರಣವನ್ನು ಭೇದಿಸಿರುವ ಕೋಣನಕುಂಟೆ ಪೊಲೀಸರು, ವೃದ್ಧೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಮಂಜುಳಾ ಅಲಿಯಾಸ್‌ ಕಳ್‌ ಮಂಜಿ (44) ಹಾಗೂ ಆಕೆಯ ಎರಡನೇ ಪತಿ ಚೆಲುವರಾಯ (45) ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Advertisement

ಆರೋಪಿಗಳ ಬಂಧನದಿಂದ ಒಟ್ಟು ಆರು ಪ್ರಕರಣಗಳು ಪತ್ತೆಯಾಗಿದ್ದು 6.99 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಇನ್ನೂ ಹಲವೆಡೆ ವೃದ್ಧೆಯರಿಂದ ಚಿನ್ನಾಭರಣ ಕದ್ದಿರುವ ಶಂಕೆಯಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧೆಯರೇ ಟಾರ್ಗೆಟ್‌: ಆರೋಪಿ ಮಂಜುಳಾ ಹಲವು ವರ್ಷಗಳಿಂದ ವೃದ್ಧೆಯರಿಂದ ಚಿನ್ನಾಭರಣ ಕದಿಯುವ ಕೃತ್ಯ ನಡೆಸುತ್ತಿದ್ದು 2017ರಲ್ಲಿ ಜೈಲಿಗೆ ಹೋಗಿದ್ದಳು. ಜಾಮೀನಿನ ಮೇರೆಗೆ ಬಿಡುಗೆಗೊಂಡ ಬಳಿಕ ಪುನಃ ಹಳೆ ಕಸುಬು ಮುಂದುವರಿಸಿದ್ದಳು. ನಗರದ ಹೊರವಲಯ,ಬೆಂಗಳೂರು ಗ್ರಾಮಾಂತರ ಸೇರಿ ಹೊರ ಜಿಲ್ಲೆಗಳಿಗೆ ಚೆಲುವರಾಯನ ಜತೆ ತೆರಳುತ್ತಿದ್ದ ಮಂಜುಳಾ ಒಂಟಿಯಾಗಿ ರಸ್ತೆಬದಿ ನಡೆದುಹೋಗುವ ವೃದ್ಧೆಯರನ್ನು ಗುರ್ತಿಸುತ್ತಿದ್ದಳು.

ಬಳಿಕ ಅವರನ್ನು ಪರಿಚಯ ಮಾಡಿಕೊಂಡು ಅವರಿಗೆ ಗೊತ್ತಾಗದ ಹಾಗೆ ಹಣವನ್ನು ರಸ್ತೆಗೆ ಹಾಕುತ್ತಿದ್ದಳು ನಿಮ್ಮ ಹಣ ಬಿದ್ದಿದೆ ನೋಡಿ ಎಂದು ಹೇಳುತ್ತಿದ್ದಳು. ಆಕೆಯ ಮಾತು ನಂಬಿ ಹಣ ಪಡೆಯಲು ವೃದ್ಧರು ಬಗ್ಗಿದ ಕೂಡಲೇ ಕತ್ತಿನಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಚೆಲುವರಾಯನ ಜತೆ ಪರಾರಿಯಾಗುತ್ತಿದ್ದಳು. ಕೆಲವೊಮ್ಮೆ ಕಳ್ಳರಿದ್ದಾರೆ, ಚಿನ್ನಾಭರಣ ಬಿಡಿಸಿಟ್ಟುಕೊಳ್ಳಿ ಎಂದು ಹೇಳುತ್ತಿದ್ದಳು.

ನನಗೆ ರಸ್ತೆಯಲ್ಲಿ ಹಣದ ಬ್ಯಾಗ್‌ ಸಿಕ್ಕಿದೆ ಹಂಚಿಕೊಳ್ಳೋಣ ಎಂದು ನಂಬಿಸಿಯೂ ವೃದ್ಧೆಯರನ್ನು ಯಾಮಾರಿಸಿ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದಳು. ಮಂಜುಳಾ ವಂಚನೆ ಮಾಡಿ ಚಿನ್ನಾಭರಣ ದೋಚುವ ಸಮಯಕ್ಕೆ ಸರಿಯಾಗಿ ಚೆಲುವರಾಯ ಬೈಕ್‌ನಲ್ಲಿ ಹಿಂದೆಯೇ ಇರುತ್ತಿದ್ದ. ಚಿನ್ನಾಭರಣ ಕದ್ದ ಬಳಿಕ ಮಂಜುಳಾಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ವೇಗವಾಗಿ ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ವೃದ್ಧೆಯರ ಚಿನ್ನಾಭರಣವನ್ನೂ ದೋಚಿದ್ದಾರೆ: ಪ್ರಕರಣದ ಪ್ರಮುಖ ಆರೋಪಿಗಳಾದ ಮಂಜುಳಾ ಹಾಗೂ ಚೆಲುವರಾಯನನ್ನು ಬಂಧಿಸಿದ ಬಳಿಕ ಅರಕಲಗೋಡು, ಯಳಂದೂರು, ಹುಣಸೂರು, ಚನ್ನರಾಯನಪಟ್ಟಣ ಸೇರಿ ವಿವಿಧೆಡೆ ಗಮನ ಬೇರೆಡೆ ಸೆಳೆದು ವೃದ್ಧೆಯರ ಬಳಿ ಚಿನ್ನಾಭರಣ ದೋಚಿದ ಮಾಹಿತಿ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿ ಹೇಳಿದರು.

ಲಕ್ಷ ರೂ.ಗೆ ಡೀಲ್‌: ನ.25ರಂದು ಶಂಕರ್‌ ಎಂಬಾತನ ಮೇಲೆ ಬನ್ನೇರುಘಟ್ಟ ರಸ್ತೆಯಲ್ಲಿ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಕುರಿತು ಶಂಕರ್‌ನ ಎರಡನೇ ಪತ್ನಿ ಮಾಲಾ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ಚುರುಕುಗೊಳಿಸಿದ ಇನ್ಸ್‌ಪೆಕ್ಟರ್‌ ಟಿ.ಎಂ.ಧರ್ಮೇಂದ್ರ ನೇತೃತ್ವದ ತಂಡ, ಶಂಕರ್‌ನನ್ನು ಕೊಲ್ಲಲು ಯತ್ನಿಸಿದ್ದ ಆಂಧ್ರ ಮೂಲದ ರಾಮಚಂದ್ರ, ಗಣೇಶ್‌, ಮಂಜುನಾಥ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಶಂಕರ್‌ನನ್ನು ಕೊಲ್ಲಲು ಮುಂಜುಳಾ ಸುಪಾರಿ ನೀಡಿದ್ದಳು ಎಂಬ ಸಂಗತಿ ಬಯಲಾಗಿದೆ.

ಈ ಹಿಂದೆ ಮಂಜುಳಾ ಮೊದಲ ಗಂಡ ಶಂಕರ್‌ ಜತೆ ಸೇರಿ ಚಿನ್ನಾಭರಣ ದೋಚುತ್ತಿದ್ದಳು. ಕೆಲ ವರ್ಷಗಳಿಂದ ಆಕೆಯನ್ನು ಬಿಟ್ಟಿದ್ದ ಶಂಕರ್‌, ಮತ್ತೂಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಮೊದಲನೇ ಗಂಡ ತಾನು ಮಾಡುವ ವಂಚನೆ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎಂದು ಕೋಪಗೊಂಡಿದ್ದ ಮಂಜುಳಾ, ಶಂಕರ್‌ನನ್ನು ಕೊಲ್ಲಲು ಒಂದು ಲಕ್ಷ ರೂ.ಗಳಿಗೆ ಸುಫಾರಿ ನೀಡಿದ್ದಳು ಎಂಬ ವಿಚಾರ ಬಯಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next