Advertisement

ಬಿಸಿಲಿಗೆ ಪರದೆ ಸನ್‌ಸ್ಕ್ರೀನ್‌

07:26 PM Feb 06, 2020 | Team Udayavani |

ಈ ವರ್ಷ ಯಾಕೋ ಚಳಿಗಾಲ ಬಹಳ ನಿಧಾನವಾಗಿ ಕಾಲಿರಿಸಿದೆ. ಆದ್ದರಿಂದ ಜನವರಿ ಮುಗಿಯುತ್ತಿದ್ದರೂ ಚಳಿಯ ಹೆಜ್ಜೆಗಳು ಇನ್ನೂ ಉಳಿದಿವೆ. ಹಾಗೆಂದು ಸುಮ್ಮನೇ ಇರುವಂತಿಲ್ಲ. ಕರಾವಳಿ ಜಿಲ್ಲೆಗಳ ಚಳಿಯನ್ನಾದರೂ ಹೇಗಾದರೂ ನಿಭಾಯಿಸಬಹುದು. ಆದರೆ ಸೆಕೆಯನ್ನು ನಿಭಾಯಿಸುವುದು ದೊಡ್ಡ ಸವಾಲೇ ಸರಿ.

Advertisement

ಸೂಕ್ಷ್ಮ ಚರ್ಮದವರು ಮನೆಯಿಂದ ಹೊರಡುವಾಗ ಮಾತ್ರವಲ್ಲ, ಬ್ಯಾಗ್‌ನಲ್ಲಿಯೂ ಒಂದು ಚಿಕ್ಕ ಕ್ರೀಮ್‌ ಪ್ಯಾಕೆಟ್‌ ಇಟ್ಟುಕೊಳ್ಳುವುದುಂಟು. ಆದರೆ, ಈ ಸನ್‌ಸ್ಕ್ರೀನ್‌ ಖರೀದಿಸುವ ಮುನ್ನ ಕೆಲವು ವಿಚಾರಗಳನ್ನು ತಿಳಿದಿರಬೇಕು. ಸೂರ್ಯನಿಂದ ಹೊರಟ ಅಲ್ಟ್ರಾ ವಯೋಲೇಟ್‌(ಯುವಿ) ಕಿರಣಗಳನ್ನು ತಡೆಯಲು ಈ ಕ್ರೀಮ್‌ ಬಳಸುವುದು. ಈ ಕಿರಣಗಳಲ್ಲಿ ಎರಡು ವಿಧಗಳಿವೆ. ಯುವಿ “ಎ’ ಕಿರಣಗಳು ಮತ್ತು ಯುವಿ “ಬಿ’ ಕಿರಣಗಳು. ಸಾಮಾನ್ಯವಾಗಿ ಸನ್‌ಸ್ಕ್ರೀನ್‌ಗಳು ಯುವಿ “ಬಿ’ ಕಿರಣಗಳನ್ನು ತಡೆಯುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ, ಕೆಲವು ಪರೀಕ್ಷೆಗಳಲ್ಲಿ ಪಾಸಾದ ಸನ್‌ಸ್ಕ್ರೀನ್‌ಗಳು ಮಾತ್ರ ಯುವಿ “ಎ’ ಕಿರಣಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದ್ದರಿಂದ ಖರೀದಿಸುವಾಗ ಕ್ರೀಮ್‌ ಪ್ಯಾಕೆಟ್‌ನಲ್ಲಿರುವ ಎಸ್‌ಪಿಎಫ್ (sun protection factor) ಅನ್ನು ಗಮನಿಸುವುದು ಮುಖ್ಯ. ಕ್ರೀಮ್‌ ಖರೀದಿಸುವಾಗ ಎಸ್‌ಪಿಎಫ್ 30ಕ್ಕಿಂತ ಹೆಚ್ಚು ಇದ್ದರೆ ಅದು ಚರ್ಮವನ್ನು ಯುವಿ ಕಿರಣಗಳಿಂದ ಶೇ. 93ರಷ್ಟು ರಕ್ಷಿಸುತ್ತದೆ. ಎಸ್‌ಪಿಎಫ್ ಹೆಚ್ಚು ಇದ್ದಷ್ಟು ರಕ್ಷಣೆ ಹೆಚ್ಚು ಎಂದರ್ಥ. ಆದರೆ, ಯಾವುದೇ ಕ್ರೀಮ್‌ಗಳೂ ಶೇ. 100ರಷ್ಟು ರಕ್ಷಣೆ ಕೊಡುವ ಭರವಸೆ ನೀಡುವುದಿಲ್ಲ. ಎಸ್‌ಪಿಎಫ್ 100 ಇದ್ದರೆ ಅದು ಚರ್ಮಕ್ಕೆ ಶೇ. 99ರಷ್ಟು ರಕ್ಷಣೆ ಕೊಡುವುದಾಗಿ ಭರವಸೆ ನೀಡುತ್ತದಷ್ಟೇ. ಆದರೆ, ಎಸ್‌ಪಿಎಫ್ ಶೇ. 15ಕ್ಕೂ ಕಡಿಮೆ ಇದ್ದಾಗ, ಅದರಲ್ಲಿ ಎಚ್ಚರಿಕೆಯ ಸಾಲೊಂದನ್ನು ಬರೆದಿರುವುದು ಅವಶ್ಯಕ ಎಂದು ಆಹಾರ ಮತ್ತು ಔಷಧ ನಿಯಂತ್ರಣ ನಿಯಮಗಳು ಹೇಳುತ್ತವೆ.

ವಾಟರ್‌ಪ್ರೂಫ್ ಸನ್‌ಸ್ಕ್ರೀನ್‌ ಎಂದು ಹೇಳಿಕೊಳ್ಳುವ ಯಾವ ಉತ್ಪನ್ನವೂ ನೀರು ಚರ್ಮವನ್ನು ತಟ್ಟದಂತೆ ತಡೆಯುವುದು ಸಾಧ್ಯವಿಲ್ಲ. ಅಲ್ಲದೆ ಸ್ವೆಟ್‌ ಪ್ರೂಫ್ ಎಂದು ಹೇಳುವ ಕ್ರೀಮ್‌ಗಳೂ ಮನುಷ್ಯನ ಚರ್ಮ ಬೆವರದಂತೆ ತಡೆಯುವ ಸಾಮರ್ಥ್ಯ ಹೊಂದಿಲ್ಲ. ಕ್ರೀಮ್‌ ಹಾಕಿಕೊಂಡು ಎಷ್ಟು ನಿಮಿಷಗಳ ಕಾಲ ಮಳೆಯಲ್ಲಿ ನಿಲ್ಲಬಹುದು, ಈಜಬಹುದು ಎಂಬುದನ್ನಷ್ಟೇ ಅವು ಹೇಳು¤ವೆ. ಬೆವರಿದಾಗ, ಕ್ರೀಮ್‌ ಮುಖದ ಮೇಲೆ ಕಲೆಸಿ ಹೋಗುವುದಿಲ್ಲವಷ್ಟೇ ವಿನಃ, ಬೆವರನ್ನು ತಡೆಹಿಡಿಯುವುದು ಸಾಧ್ಯವಿಲ್ಲ. ಬೆವರುವುದು ಆರೋಗ್ಯದ ಲಕ್ಷಣ.

ಇನ್ನು ಬಿಸಿಲಿನ ತಾಪದಿಂದ ಬಚಾವ್‌ ಆಗಲು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲಿಗೆ ಮೈ ಒಡ್ಡಿಕೊಳ್ಳದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಒಂದುವೇಳೆ ಬಿಸಿಲಿಗೆ ಹೋಗುವುದು ಅನಿವಾರ್ಯವಾದರೆ ಕೊಡೆ ಹಿಡಿದುಕೊಂಡು, ಅಥವಾ ಅಗಲವಾದ ಟೋಪಿ ಧರಿಸಿಕೊಂಡು ಹೋಗಬಹುದು. ಗ್ಲಿಸರಿನ್‌ಯುಕ್ತ ನೀರಿನಲ್ಲಿ ಮುಖ ತೊಳೆಯುವುದರಿಂದಲೂ ಚರ್ಮದ ತೇವವನ್ನು ಕಾಪಾಡಿಕೊಳ್ಳಬಹುದು. ಫೇಸ್‌ವಾಶ್‌ ಬಳಸಿಯೇ ಮುಖತೊಳೆಯುವುದರಿಂದ ಚರ್ಮದಲ್ಲಿ ಕೊಳೆ, ಧೂಳು ಶೇಖರಣೆ ಆಗುವುದಿಲ್ಲ.

ಪ್ರತಿಮಾ ರಾವ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next