ಲಂಡನ್: ಸೂರ್ಯ ಸ್ಫೋಟಗೊಂಡಿದ್ದಾನೆ… ಅಷ್ಟೇ ಅಲ್ಲ. ಈ ಭೀಕರ ಸ್ಫೋಟದ ತೀವ್ರತೆಗೆ 2 ಲಕ್ಷ ಕಿ.ಮೀ.ನಷ್ಟು ಉದ್ದದ ಪ್ರಖರ ಬೆಳಕಿನ ತಂತುವೊಂದು ಹೊರಸೂಸಲ್ಪಟ್ಟಿದ್ದು, ಅದು ಭೂಮಿಯತ್ತ ನುಗ್ಗಿ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸೋಹೋ ವೀಕ್ಷಣಾಲಯದ ಪ್ರಕಾರ, ಮಂಗಳವಾರ ಸೂರ್ಯನ ದಕ್ಷಿಣ ಗೋಳಾರ್ಧದಿಂದ 2 ಲಕ್ಷ ಕಿ.ಮೀ. ಉದ್ದವಿರುವ ಮ್ಯಾಗ್ನೆಟಿಸಂನ ತಂತು ವ್ಯಾಪಿಸತೊಡಗಿದ್ದು, ನೋಡಲು ರಬ್ಬರ್‌ಬ್ಯಾಂಡ್ ರೀತಿ ಗೋಚರಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಸ್ಫೋಟದ ಅವಶೇಷಗಳು ಭೂಮಿಯತ್ತ ಸಂಚರಿಸುತ್ತಿದ್ದು, ಸ್ಫೋಟ ನಡೆದ ಸ್ಥಳದಿಂದ ದೊಡ್ಡ ಮಟ್ಟದಲ್ಲಿ ಸೌರ ಜ್ವಾಲೆಯು ಹೊರಹೊಮ್ಮುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಆದರೆ, ಈ ಕೊರೊನಲ್ ಮಾಸ್ ಇಜೆಕ್ಷನ್(ಸಿಎಂಇ)ನ ದತ್ತಾಂಶವು ಪೂರ್ಣಪ್ರಮಾಣದಲ್ಲಿ ಗೋಚರಿಸಿಲ್ಲ.
ಇದೇ ವೇಳೆ, ಅತ್ಯಂತ ದೊಡ್ಡ ಸನ್ ಸ್ಪಾಟ್ ಎಂದು ಕರೆಸಿಕೊಳ್ಳುವ ಎಆರ್3112 ಕೂಡ ಅಸ್ಥಿರವಾಗಿದ್ದು, ಯಾವುದೇ ಕ್ಷಣದಲ್ಲಾದರೂ ಅದು ಸ್ಫೋಟಗೊಳ್ಳಬಹುದು. ಈ ಸ್ಫೋಟವೂ ನೇರವಾಗಿ ಭೂಮಿಯತ್ತ ಮುಖ ಮಾಡುವ ಸಾಧ್ಯತೆಯಿದ್ದು, ಭೂಮಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ತಜ್ಞರು.
ಸೌರ ಜ್ವಾಲೆಗಳು ಅತ್ಯಂತ ಪ್ರಖರವಾಗಿರುವ ಕಾರಣ, ಭೂಮಿಯಲ್ಲಿರುವ ರೇಡಿಯೋ ಕಮ್ಯೂನಿಕೇಷನ್‌ಗಳು, ವಿದ್ಯುತ್ ಗ್ರಿಡ್‌ಗಳು, ನೇವಿಗೇಷನ್ ಸಂಕೇತಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಅಲ್ಲದೇ, ಬಾಹ್ಯಾಕಾಶ ನೌಕೆಗಳು ಹಾಗೂ ಗಗನಯಾತ್ರಿಗಳಿಗೆ ಅಪಾಯ ಉಂಟುಮಾಡುತ್ತವೆ.