Advertisement

ಹೈದರಾಬಾದ್‌-ಡೆಲ್ಲಿ ಟಾಪ್‌ ವರ್ಸಸ್‌ ಬಾಟಮ್‌ ತಂಡಗಳ ಸೆಣಸು

06:30 AM May 10, 2018 | Team Udayavani |

ಹೊಸದಿಲ್ಲಿ: ಒಂದು ಈ ಐಪಿಎಲ್‌ನ ಅಗ್ರಸ್ಥಾನಿ ತಂಡ, ಇನ್ನೊಂದು ಅಂಕಪಟ್ಟಿಯಲ್ಲಿ ತಳ ತಲುಪಿರುವ ತಂಡ-ಸನ್‌ರೈಸರ್ ಹೈದರಾಬಾದ್‌ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌. ಇತ್ತಂಡಗಳು ಗುರುವಾರ ರಾತ್ರಿ ಫಿರೋಜ್‌ ಷಾ ಕೋಟ್ಲಾ ಅಂಗಳದಲ್ಲಿ ದ್ವಿತೀಯ ಸುತ್ತಿನ ಹೋರಾಟವೊಂದನ್ನು ನಡೆಸಲಿವೆ.

Advertisement

ಶನಿವಾರವಷ್ಟೇ ಹೈದರಾಬಾದ್‌ನಲ್ಲಿ ಏರ್ಪಟ್ಟ ಮುಖಾಮುಖೀಯಲ್ಲಿ ಕೇನ್‌ ವಿಲಿಯಮ್ಸನ್‌ ಪಡೆ 7 ವಿಕೆಟ್‌ಗಳ ಜಯ ಸಾಧಿಸಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವುದಷ್ಟೇ ಡೆಲ್ಲಿ ಮುಂದಿರುವ ಸದ್ಯದ ಗುರಿ.

ಹೈದರಾಬಾದ್‌ ಹತ್ತರಲ್ಲಿ 8 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ, ಅಷ್ಟೇ ಅಲ್ಲ ಮುಂದಿನ ಸುತ್ತನ್ನೂ ಪ್ರವೇಶಿಸಿದೆ. ಇನ್ನೂ ಕೆಲವು ಪಂದ್ಯಗಳನ್ನು ಜಯಿಸಿ ಅತ್ಯಧಿಕ ಅಂಕ ಸಂಪಾದಿಸುವುದು ಸನ್‌ರೈಸರ್ ಯೋಜನೆ.
ಇನ್ನೊಂದೆಡೆ ಡೆಲ್ಲಿ ಹತ್ತರಲ್ಲಿ ಮೂರನ್ನಷ್ಟೇ ಗೆದ್ದು ಕಟ್ಟಕಡೆಯ ಸ್ಥಾನದ ಅವಮಾನ ಎದುರಿಸುತ್ತಿದೆ. ಕೂಟದಿಂದ ಈಗಾಗಲೇ ಒಂದು ಕಾಲು ಹೊರಗಿರಿಸಿದೆ. ಉಳಿದ 4 ಪಂದ್ಯ ಗೆದ್ದರೆ ಅಂಕ 14ಕ್ಕೆ ಏರುತ್ತದಾದರೂ ಇದರಿಂದ ಲಾಭವಾಗುವ ಸಂಭವ ಕಡಿಮೆ. ಆದ್ದರಿಂದ ಸಾಧ್ಯವಾದಷ್ಟು ಪಂದ್ಯಗಳನ್ನು ಜಯಿಸಿ ಒಂದಿಷ್ಟು ಪ್ರತಿಷ್ಠೆ ಗಳಿಸುವುದು ಶ್ರೇಯಸ್‌ ಅಯ್ಯರ್‌ ಪಡೆಯ ಲೆಕ್ಕಾಚಾರ.

ಸೋಲನ್ನು ಸೆಳೆದುಕೊಂಡ ಡೆಲ್ಲಿ!
ಹೈದರಾಬಾದ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಡೆಲ್ಲಿ 5ಕ್ಕೆ 163 ರನ್‌ ಗಳಿಸಿ ಸವಾಲೊಡ್ಡಿದರೂ ಅಂತಿಮ 2 ಓವರ್‌ಗಳಲ್ಲಿ ಪಂದ್ಯವನ್ನು ಕಳೆದುಕೊಳ್ಳಬೇಕಾದ ಸಂಕಟಕ್ಕೆ ಸಿಲುಕಿತ್ತು. ಅನುಭವಿ ಬೌಲರ್‌ಗಳಾದ ಡೇನಿಯಲ್‌ ಕ್ರಿಸ್ಟಿಯನ್‌ ಮತ್ತು ಟ್ರೆಂಟ್‌ ಬೌಲ್ಟ್ ಅಂತಿಮ 2 ಓವರ್‌ಗಳಲ್ಲಿ 28 ರನ್‌ ಬಿಟ್ಟುಕೊಟ್ಟು ಡೆಲ್ಲಿ ಸೋಲಿಗೆ ಕಾರಣರಾಗಿದ್ದರು. ಅಲೆಕ್ಸ್‌ ಹೇಲ್ಸ್‌, ಯೂಸುಫ್ ಪಠಾಣ್‌ ಅವರ ಕ್ಯಾಚ್‌ಗಳನ್ನು ಕೈಚೆಲ್ಲಿದ್ದೂ ಡೆಲ್ಲಿಗೆ ದುಬಾರಿಯಾಗಿ ಪರಿಣಮಿಸಿತು. ಇಂಥ ತಪ್ಪು ಮರು ಪಂದ್ಯದಲ್ಲಿ ಮರುಕಳಿಸಬಾರದು ಎಂದಿದ್ದಾರೆ ಡೆಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌.

“ಹೈದರಾಬಾದ್‌ ವಿರುದ್ಧ ಅನುಭವಿಸಿದ ಸೋಲಿನಿಂದ ಬಹಳ ಬೇಸರವಾಗಿದೆ. ಒಂದು ಹಂತದಲ್ಲಿ ನಾವೇ ಗೆಲುವಿನ ಹಾದಿಯಲ್ಲಿದ್ದೆವು. ನಿರ್ಣಾಯಕ ಹಂತದಲ್ಲಿ ಕ್ಯಾಚ್‌ಗಳನ್ನು ನೆಲಕ್ಕೆ ಹಾಕಿ ಎದುರಾಳಿಯ ಹಾದಿ ಸುಗಮವಾಗುವಂತೆ ನೋಡಿಕೊಂಡೆವು. ಇಂಥ ತಪ್ಪುಗಳನ್ನು ಪುನರಾವರ್ತಿಸಬಾರದು’ ಎಂದು ಅಯ್ಯರ್‌ ಹೇಳಿದರು. ಅವರ ಪ್ರಕಾರ ಇದು ಡೆಲ್ಲಿಗೆ “ಮಾಡು-ಮಡಿ’ ಪಂದ್ಯ. ಆದರೆ ಡೆಲ್ಲಿಯ ಪ್ಲೇ-ಆಫ್ ಮಾರ್ಗ ಮುಚ್ಚಿದೆ ಎಂಬುದು ಗುಟ್ಟಿನ ಸಂಗತಿಯೇನಲ್ಲ.

Advertisement

ಕೋಟ್ಲಾ ಟ್ರ್ಯಾಕ್‌ನಲ್ಲಿ ಧಾರಾಳ ರನ್‌ ಹರಿದು ಬರುವುದರಿಂದ ಸೇಡು ತೀರಿಸಲು ಸಾಧ್ಯ ಎಂಬುದು ಡೆಲ್ಲಿ ಲೆಕ್ಕಾಚಾರ. ಆರಂಭಕಾರ ಪೃಥ್ವಿ ಶಾ ಮೇಲೆ ತಂಡ ಭಾರೀ ಭರವಸೆ ಇರಿಸಿದೆ. ಆದರೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಓಪನಿಂಗ್‌ ಪ್ರಯೋಗ ಕೈಕೊಟ್ಟಿದೆ. ಹೀಗಾಗಿ ಮತ್ತೆ ಕಾಲಿನ್‌ ಮುನ್ರೊ ಈ ಸ್ಥಾನಕ್ಕೆ ಮರಳಬಹುದು. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಒಬ್ಬನೇ ಸ್ಪಿನ್ನರ್‌ನನ್ನು ನೆಚ್ಚಿಕೊಂಡಿತ್ತು. ಈ ಬಾರಿ ಅಮಿತ್‌ ಮಿಶ್ರಾ ಜತೆಗೆ ಮತ್ತೂಬ್ಬ ಸ್ಪಿನ್ನರ್‌ನನ್ನು ಕಣಕ್ಕಿಳಿಸಬಹುದು.

ಹೈದರಾಬಾದ್‌ ಸಶಕ್ತ ತಂಡ
ಸನ್‌ರೈಸರ್ ಹೈದರಾಬಾದ್‌ ಸದ್ಯ ಯಾವುದೇ ಚಿಂತೆಯನ್ನಾಗಲಿ, ಆತಂಕವನ್ನಾಗಲಿ ಹೊಂದಿಲ್ಲ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆರಡೂ ಅತ್ಯಂತ ಬಲಿಷ್ಠವಾಗಿವೆ. ಡೆಲ್ಲಿಗೆ ಮತ್ತೂಂದು ಸೋಲುಣಿಸಲು ಈ ಸಾಮರ್ಥ್ಯ ಧಾರಾಳ ಸಾಕು. ಹೀಗಾಗಿ ಅಯ್ಯರ್‌ ಪಡೆ ಹೇಗೆ ತಿರುಗಿ ಬಿದ್ದೀತೆಂಬುದು ಗುರುವಾರ ರಾತ್ರಿಯ ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next