ಹೈದರಾಬಾದ್: ಕಳೆದ ಕೆಲವು ಸೀಸನ್ ಗಳಿಂದ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಮತ್ತೆ ತನ್ನ ಕೋಚಿಂಗ್ ಸ್ಟಾಫ್ ಬದಲಾವಣೆ ಮಾಡಿದೆ. ಮುಖ್ಯ ಕೋಚ್ ಆಗಿದ್ದ ಬ್ರಿಯಾನ್ ಲಾರಾ ಅವರನ್ನು ಹುದ್ದೆಯಿಂದ ತೆಗೆದು ಹಾಕಿದ ಫ್ರಾಂಚೈಸಿಯು ಹೊಸ ಆಯ್ಕೆ ಮಾಡಿದೆ.
ನ್ಯೂಜಿಲ್ಯಾಂಡ್ ನ ಮಾಜಿ ನಾಯಕ, ಮಾಜಿ ಆರ್ ಸಿಬಿ ಕೋಚ್ ಡೇನಿಯಲ್ ವೆಟ್ಟೊರಿ ಅವರನ್ನು ಮುಖ್ಯ ಕೋಚ್ ಆಗಿ ಸನ್ ರೈಸರ್ಸ್ ಹೈದರಾಬಾದ್ ನೇಮಕ ಮಾಡಿದೆ. ಈ ಬಗ್ಗೆ ಫ್ರಾಂಚೈಸಿಯು ಇಂದು ಅಧಿಕೃತ ಹೇಳಿಕೆ ನೀಡಿದೆ.
ಐಪಿಎಲ್ ನಲ್ಲಿ ವೆಟ್ಟೊರಿ ಅವರು ಎರಡನೇ ಬಾರಿ ಕೋಚಿಂಗ್ ಹುದ್ದೆ ನಿಭಾಯಿಸುತ್ತಿದ್ದಾರೆ. ಈ ಹಿಂದೆ 2014ರಿಂದ 2018ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿದ್ದರು. 2015 ಮತ್ತು 2016ರಲ್ಲಿ ಆರ್ ಸಿಬಿ ಪ್ಲೇ ಆಫ್ ಪ್ರವೇಶಿಸಿತ್ತು.
ಸದ್ಯ ಇಂಗ್ಲೆಂಡ್ ನ ಹಂಡ್ರೆಡ್ ಟೂರ್ನಿಯಲ್ಲಿ ಬರ್ಮಿಂಗಂ ಫಿನಿಕ್ಸ್ ತಂಡದ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ವೆಟ್ಟೊರಿ ಅವರು ಇತ್ತೀಚೆಗೆ ಆಸ್ಟ್ರೇಲಿಯಾ ಪುರುಷರ ತಂಡದ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಅವರು ಬಾಂಗ್ಲಾದೇಶದೊಂದಿಗೆ ಸ್ಪಿನ್ ಸಲಹೆಗಾರರಾಗಿಯೂ ಸಹ ಕೆಲಸ ಮಾಡಿದ್ದಾರೆ.
ಬ್ರಿಯಾನ್ ಲಾರಾ ಅವರನ್ನು ಕೈಬಿಡುವ ಬಗ್ಗೆ ಫ್ರಾಂಚೈಸಿಯು ಅಧಿಕೃತ ಮಾಹಿತಿ ನೀಡಿದ್ದು, ಲಾರಾ ಅವರೊಂದಿಗಿನ ಎರಡು ವರ್ಷಗಳ ಒಪ್ಪಂದ ಮುಗಿದಿದೆ ಎಂದಿದೆ.
ಲಾರಾ ಅವರು 2022ರಲ್ಲಿ ಬ್ಯಾಟಿಂಗ್ ಕೋಚ್ ಆಗಿ ಹೈದರಾಬಾದ್ ತಂಡ ಸೇರಿದ್ದರು. 2023ರ ಐಪಿಎಲ್ ನಲ್ಲಿ ಟಾಮ್ ಮೂಡಿ ಅವರಿಂದ ತೆರವಾದ ಸ್ಥಾನಕ್ಕೆ ಮುಖ್ಯ ಕೋಚ್ ಆಗಿ ಬಂದಿದ್ದರು.
ಲಾರಾ ಅವರ ಅವಧಿಯಲ್ಲಿ ಅಂದರೆ 2023ರ ಐಪಿಎಲ್ ನಲ್ಲಿ ಫ್ರಾಂಚೈಸಿಯು 10 ನೇ ಸ್ಥಾನ ಗಳಿಸಿತ್ತು.