ಅಜೆಕಾರು: ರಾಜ್ಯದ ಅತ್ಯಂತ ಪ್ರಮುಖ ಸಮಸ್ಯೆಯಾಗಿರುವ ಡೀಮ್ಡ್ ಅರಣ್ಯ ಸಮಸ್ಯೆಯಿಂದ ಜನರು ನಿವೇಶನ, ಮನೆ, ಕೃಷಿ ಚಟುವಟಿಕೆ ಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಸರಕಾರ ಡೀಮ್ಡ್ ಅರಣ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಕೆಲವೇ ತಿಂಗಳಲ್ಲಿ ಅಧಿಕಾರಿಗಳ ಸಭೆ ಕರೆದು ಡೀಮ್ಡ್ ಅರಣ್ಯದ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಆ.27ರಂದು ಮರ್ಣೆ ಗ್ರಾಮ ಪಂಚಾಯತ್‌ನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರ ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರ ಮಾಡುವ ಉದ್ದೇಶದೊಂದಿಗೆ ಜನಸ್ಪಂದನ ಕಾರ್ಯಕ್ರಮ ಮಾಡಲಾ ಗುತ್ತಿದ್ದು ಅಧಿಕಾರಿಗಳು ಹೆಚ್ಚಿನ ಮುತುವರ್ಜಿಯೊಂದಿಗೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದರು.
ಇದನ್ನೂ ಓದಿ:ನಡುರಸ್ತೆಯಲ್ಲಿ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಚಳಿ ಬಿಡಿಸಿದ ರಮೇಶ್ ಕುಮಾರ್
ಈ ಸಂದರ್ಭದಲ್ಲಿ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್, ಜಿ.ಪಂ ಮಾಜಿ ಸದಸ್ಯ ಉದಯ ಕೋಟ್ಯಾನ್, ಮರ್ಣೆ ಗ್ರಾ. ಪಂ. ಅಧ್ಯಕ್ಷೆ ಜ್ಯೋತಿ ಪೂಜಾರಿ, ಉಪಾಧ್ಯಕ್ಷ ಕುರುಂಬಿಲ, ತಾ.ಪಂ. ಇಒ ಗುರುದತ್, ಪಿಡಿಒ ತಿಲಕ್‌ರಾಜ್, ಗ್ರಾ. ಪಂ. ಸದಸ್ಯರು ಉಪಸ್ಥಿತರಿದ್ದರು.
ತಾ.ಪಂ. ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಗ್ರಾ.ಪಂ. ಸದಸ್ಯ ಗುರುಪ್ರಸಾದ್ ರಾವ್ ಸ್ವಾಗತಿಸಿದರು. ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ , ವಂದಿಸಿದರು.
ಅಧಿಕಾರಿಗಳಿಗೆ ಸೂಚನೆ
ಕಾರ್ಕಳ ವಿಧಾನಸಭೆ ಕ್ಷೇತ್ರದ ಯಾವುದೇ ಗ್ರಾಮದಲ್ಲಿಯೂ ವಿದ್ಯುತ್ ಸಮಸ್ಯೆ ಇರಬಾರದು. ಲೋ ವೋಲ್ಟೇಜ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅಗತ್ಯವಿದ್ದಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸುವ ಕುರಿತು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.