ಉಡುಪಿ : ಸಿದ್ದರಾಮಯ್ಯ ನಡವಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಕೊಡಗಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಸಿದ್ದರಾಮಯ್ಯಗೆ ಮೊಟ್ಟೆ ಎಸೆದದ್ದು ಡಿಕೆ ಶಿವಕುಮಾರ್ ಬಣವೋ? ಪರಮೇಶ್ವರ್ ಬಣವೋ? ಎಂದು ಸಚಿವ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ರವಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಆಂತರಿಕ ತನಿಖೆಯಲ್ಲಿ ಅದನ್ನು ಬಹಿರಂಗಪಡಿಸಬೇಕು. ವಿನಾಕಾರಣ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯನವರು ಆಡಳಿತದಲ್ಲಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿದ್ದರು ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರು ನಿರಂತರ ಸಮಾಜ ವಿರೋಧಿ – ತದ್ವಿರುದ್ಧ ಹೇಳಿಕೆಗಳನ್ನು ಕೊಡುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಮಾತನಾಡಿದಾಗ ಇಡೀ ರಾಜ್ಯದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಪ್ರತಿಭಟನೆ ಮಾಡಲೇಬಾರದು ಎಂದಾದರೆ ಕೇವಲ ಮುಸ್ಲಿಂ ಪ್ರದೇಶಗಳಲ್ಲಿ ಮಾತ್ರ ಓಡಾಟ ಮಾಡಬೇಕಾಗುತ್ತದೆ. ಉಳಿದ ಪ್ರದೇಶಗಳಲ್ಲಿ ಸಮಾಜ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ಮಾಡಿಯೇ ಮಾಡುತ್ತದೆ. ಪ್ರತಿಭಟನೆಗಳನ್ನು ಸಿದ್ದರಾಮಯ್ಯ ಗೌರವಪೂರ್ಣವಾಗಿ ಸ್ವೀಕರಿಸಬೇಕು ಎಂದರು.
ಸ್ವಾತಂತ್ರ್ಯ ಹೋರಾಟಗಾರರು, ಮಹಾಪುರುಷರ ಬಗ್ಗೆ ಗೌರವಪೂರ್ಣವಾಗಿ ಮಾತನಾಡಿದರೆ ಸಮಾಜ ಕೂಡ ಸಹಜ ಸ್ಥಿತಿಯಲ್ಲಿರುತ್ತದೆ. ಅಧಿಕಾರದಲ್ಲಿದ್ದಾಗ ಮತ್ತು ಈಗ ಸಿದ್ದರಾಮಯ್ಯ ಸಮಾಜ ವಿರೋಧಿ ಹಿಂದೂ ವಿರೋಧಿ ಎಂಬುದು ಸ್ಪಷ್ಟವಾಗಿದೆ ಎಂದರು.
ಕಾಂಗ್ರೆಸ್‌ನಿಂದ ಮಡಿಕೇರಿ ಚಲೋ ವಿಚಾರದಲ್ಲಿ ಕಾಂಗ್ರೆಸ್‌ನ ಟೂಲ್ ಅಜೆಂಡಾ ಕಾಣುತ್ತಿದೆ. ತಮ್ಮ ನಾಯಕರ ವಿರುದ್ಧ ತಮ್ಮ ಕಾರ್ಯಕರ್ತರೇ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸ್ಫೋಟ ಮಾಡುತ್ತಿದ್ದಾರೆ. ಈಗ ಕೊಡಗು ಚಲೋ ಮಾಡುತ್ತೇವೆ ಅನ್ನುತ್ತಿದ್ದಾರೆ. ಕೊಡಗಿಗೆ ಕಾಲ್ನಡಿಗೆ ಮಾಡಲು ಯಾರದ್ದೂ ವಿರೋಧ ಇಲ್ಲ. ನಿಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ನೀವು ಯಾರ ವಿರುದ್ಧ ಕಾಲ್ನಡಿಗೆ ಮಾಡುತ್ತೀರಿ? ಯಾರ ವಿರುದ್ಧ ನೀವು ಪ್ರತಿಭಟನೆಗಳನ್ನು ಮಾಡುತ್ತೀರಿ? ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಈ ವಿಚಾರವನ್ನು ಸ್ಪಷ್ಟಪಡಿಸಬೇಕು. ಮಳೆ-ನೆರೆ ಹಾನಿಯಾಗಿ ಎಷ್ಟು ದಿನ ಆಯಿತು? ಇವತ್ತು ನೆರೆಪೀಡಿತ ಪ್ರದೇಶಗಳಿಗೆ ಹೋಗುತ್ತಿರುವುದು ಒಂದು ನಾಟಕವಾಗಿದೆ.
ಪೂರ್ವನಿಯೋಜಿತವಾಗಿಯೇ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಮೊಟ್ಟೆ ಎಸೆದವನೇ ತನ್ನನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೆ ಕೊಟ್ಟಿದ್ದಾನೆ. ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧವೇ ಕಾಲ್ನಡಿಗೆ ಮಾಡುತ್ತಾರೆ ಎಂದರೆ ಇದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದರು.