ಬೆಂಗಳೂರು: ಕಾರ್ಕಳದಲ್ಲಿ ಸ್ಪರ್ಧಿಸಲು ಬಿಜೆಪಿ ಸಚಿವರು, ಶಾಸಕರು ತನುಮನ ಧನದ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂಬ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆಗೆ ತಿರುಗೇಟು ನೀಡಿರುವ ಕಾರ್ಕಳ ಶಾಸಕ, ಸಚಿವ ಸುನಿಲ್ ಕುಮಾರ್, ‘ನಮ್ಮ ಅನುಮಾನವೀಗ ನಿಜವಾಗಿದೆ’ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಿಯ ಮುತಾಲಿಕ್ ಜೀ, ನೀವು ಆಮಿಷಕ್ಕೆ ಒಳಗಾಗಿಯೇ ಕಾರ್ಕಳದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೀರಿ ಎಂದು ನಮಗೆ ಮೊದಲೇ ಅನುಮಾನವಿತ್ತು. ಅದೀಗ ನಿಜವಾಗಿದೆ. ಸ್ವಂತ ಬುದ್ಧಿಯಿಂದ ನೀವು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ ಎಂದಿದ್ದಾರೆ.
ನೀವು ಕಾರ್ಕಳದಿಂದ ಸ್ಪರ್ಧೆಗೆ ಇಳಿಯುವುದನ್ನು ನಾನು ಮೊದಲೇ ಸ್ವಾಗತಿಸಿದ್ದೇನೆ. ಈಗ ನಿಮಗೆ ತನು ಮನ ಧನ ಸಹಾಯ ಮಾಡುವವರೂ ಕಾರ್ಕಳಕ್ಕೆ ಬಂದು ಪ್ರಚಾರ ಮಾಡಲಿ ಎಂದು ನಾನು ಆಶಿಸುತ್ತೇನೆ. ನಿಮ್ಮ ಸ್ಪರ್ಧೆಯ ಉದ್ದೇಶ ಏನೆಂಬುದನ್ನು ಕೆಲ ದಿನಗಳ ಹಿಂದೆ ‘ವೋಟು, ನೋಟು’ ಹೇಳಿಕೆಯ ಮೂಲಕ ತಿಳಿಸಿದ್ದಿರಿ. ಈಗ ತನು ಮನ ಧನ ಸಹಾಯವಿದೆ ಎಂದು ಹೇಳುತ್ತಿದ್ದೀರಿ. ಒಟ್ಟಾರೆಯಾಗಿ ನಿಮ್ಮಈ ಸ್ಪರ್ಧೆಯ ಉದ್ದೇಶ ಕಾರ್ಕಳದ ಹಿತವಲ್ಲ, ಹಿಂದುತ್ವದ ಹಿತವಲ್ಲ, ಜನತೆಯ ಹಿತವೂ ಅಲ್ಲ. ಅದು ” ತನು- ಮನ-ಧನ” – ನೋಟಿಗಾಗಿ ಎಂಬುದು ನಿಮ್ಮ ಹೇಳಿಕೆಯಲ್ಲೇ ಸ್ಪಷ್ಟವಾಗಿದೆ ಎಂದು ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ್ದ ಪ್ರಮೋದ್ ಮುತಾಲಿಕ್ ಅವರು, ಸುನಿಲ್ ಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲ್ಪಡುತ್ತಿದ್ದು, ಮುಖ್ಯಮಂತ್ರಿ ರೇಸ್ ನಲ್ಲಿರುವ ಇತರ ಕೆಲವು ಬಿಜೆಪಿ ಮುಖಂಡರು ನನಗೆ ಸಹಕಾರದ ಭರವಸೆ ನೀಡಿದ್ದಾರೆ. ಕಾರ್ಕಳದಲ್ಲಿ ನನ್ನ ಗೆಲುವು ಖಚಿತ. ನಕಲಿ ಹಿಂದುತ್ವ ಮತ್ತು ಭ್ರಷ್ಟಾಚಾರದ ವಿರುದ್ದ ನನ್ನ ಸ್ಪರ್ಧೆ ಎಂದಿದ್ದರು.