ಉಡುಪಿ: ಮುಂದಿನ 25 ವರ್ಷಗಳಲ್ಲಿ ಉಡುಪಿ ಜಿಲ್ಲೆ ಕೃಷಿ, ಆರೋಗ್ಯ, ಶಿಕ್ಷಣ, ಉದ್ಯಮ ಹಾಗೂ ಯುವ ಜನತೆಯ ಚಿಂತನ ಲಹರಿ ಹೀಗೆ ಎಲ್ಲವೂ ಸಕಾರಾತ್ಮಕವಾಗಿ ಸಾಗಿ ಮತ್ತಷ್ಟು ಅಭಿವೃದ್ಧಿ ಕಾಣಬೇಕು. ಸುವರ್ಣ ಉಡುಪಿಗೆ ಈಗಿಂದಲೇ ಯೋಚನೆ, ಯೋಜನೆ ಆರಂಭವಾಗಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಉಡುಪಿ ಜಿಲ್ಲಾಡಳಿತದಿಂದ ರಜತೋತ್ಸವದ ಅಂಗವಾಗಿ ಶನಿವಾರ ಅಜ್ಜರಕಾಡಿನ ಪುರಭವನದಲ್ಲಿ ಹಮ್ಮಿಕೊಂಡಿರುವ “ದಿಕ್ಸೂಚಿ : ಸುವರ್ಣ ಉಡುಪಿಗೆ ರಜತ ಉಡುಪಿಯ ಪರಿಕಲ್ಪನೆ’ ಎಂಬ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಚಾರ-ವಿಚಾರ, ಜೀವನ ಪದ್ಧತಿ, ಸಾಂಸ್ಕೃತಿಕ ಚಟುವಟಿಕೆ, ಭಾಷೆ ಹೀಗೆ ಎಲ್ಲದರಲ್ಲೂ ಉಡುಪಿ ಜಿಲ್ಲೆ ಭಿನ್ನವಾಗಿದೆ. ಜಿಲ್ಲೆ ಆರಂಭವಾಗಿ 25 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಮುಂದಿನ 25 ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಕೂಡ ಜನ ನೆನಪಿಡುವಂತಹ ಸ್ತುತ್ಯರ್ಹ ಕಾರ್ಯ ನೀಡಬೇಕು ಎಂದರು.
ನವ ಭಾರತಕ್ಕೆ ನವ ಕರ್ನಾಟಕದ ಕೊಡುಗೆ ಎಂಬ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯಾರಂಭ ಮಾಡಿದೆ. ಅದರಂತೆ ಉಡುಪಿಯೂ ನವ ಕರ್ನಾಟಕ, ನವ ಭಾರತಕ್ಕೆ ಕೊಡುಗೆ ನೀಡುವಂತಾಗಬೇಕು. ಡಾ| ವಿ.ಎಸ್. ಆಚಾರ್ಯ ಸಹಿತ ಎಲ್ಲ ರಾಜಕೀಯ ಪಕ್ಷದ ನಾಯಕರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಮುಂದಿನ ಅಭಿವೃದ್ಧಿಗೆ ಸಂಬಂಧ ಎಲ್ಲ ಆಯಾಮಗಳಲ್ಲೂ, ಸಾರ್ವಜನಿಕರಿಂದಲೂ ಚರ್ಚೆ ನಡೆದು ಅದರಂತೆ ಮುಂದೆ ಸಾಗುವಂತಾಗಬೇಕು ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಿದೆ. ಶಿಕ್ಷಣದಲ್ಲೂ ಇನ್ನಷ್ಟು ಅಭಿವೃದ್ಧಿ ಕಾಣಬೇಕು. ಜಿಲ್ಲೆಯ ಒಳಗೆ ಉದ್ಯೋಗ ಸೃಷ್ಟಿಯಾಗಬೇಕು ಮತ್ತು ಸ್ಥಳೀಯವಾಗಿ ಇಲ್ಲಿನ ಯುವ ಜನತೆಗೆ ಉದ್ಯೋಗ ಸಿಗುವಂತೆ ಆಗಬೇಕು. ಇದೆಲ್ಲದರ ಜತೆಗೆ ಬ್ಯಾಂಕ್ ಸಹಿತ ವಿವಿಧ ಕ್ಷೇತ್ರಕ್ಕೆ ಬೇರೆ ರಾಜ್ಯಗಳಿಂದ ಬರುವ ಮೇಲಧಿಕಾರಿಗಳು ಇಲ್ಲಿನ ಜನರೊಂದಿಗೆ ಸಂಯಮದಿಂದ ವರ್ತಿಸ ಬೇಕು ಮತ್ತು ಸ್ಥಳೀಯ ಸಂಸ್ಕೃತಿಯ ಅರಿತು, ಅದರಂತೆ ಸಾಗಬೇಕು ಎಂದು ಸಲಹೆ ನೀಡಿದರು.
ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ, ಕೃಷಿ, ಮೀನುಗಾರಿಕೆ ಸಹಿತ ಎಲ್ಲ ಕ್ಷೇತ್ರದಲ್ಲೂ ಜಿಲ್ಲೆ ಸಮಗ್ರ ಅಭಿವೃದ್ಧಿ ಕಾಣಬೇಕು. ಈ ನಿಟ್ಟಿನಲ್ಲಿ ಹಲವು ಯೋಜನೆಗಳು, ಯೋಚನೆಗಳು ಅಗತ್ಯವಿದೆ ಎಂದರು.
ಶಾಸಕ ಲಾಲಾಜಿ ಆರ್. ಮೆಂಡನ್, ಕ್ಯಾಂಪ್ಕೋ ಅಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿಯಾಗಿದ್ದ ಕಲ್ಪನಾ, ಜಿ.ಪಂ. ಸಿಇಒ ಪ್ರಸನ್ನ ಎಚ್., ಎಸ್‌ಪಿ ಹಾಕೆ ಅಕ್ಷಯ್ ಮಚ್ಚೀಂದ್ರ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.