Advertisement

Telangana; ಕೆಸಿಆರ್ ಮಾಡಿದ ಆ ತಪ್ಪು…: ತೆಲಂಗಾಣ ಕಾಂಗ್ರೆಸ್ ಗೆಲುವಿನ ಮಾಸ್ಟರ್ ಮೈಂಡ್ ಇವರೇ

05:42 PM Dec 03, 2023 | Team Udayavani |

ಬೆಂಗಳೂರು: ಎರಡು ವರ್ಷಗಳ ಹಿಂದೆ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರು ಸುನೀಲ್ ಕನುಗೋಲು ಅವರನ್ನು ಹೈದರಾಬಾದ್ ಬಳಿಯ ತಮ್ಮ ಫಾರ್ಮ್‌ಹೌಸ್‌ ಗೆ ಚುನಾವಣೆಗಳನ್ನು ನಿರ್ವಹಿಸಲು ಅವರನ್ನು ನೇಮಿಸಿಕೊಳ್ಳುವ ಸಾಧ್ಯತೆಯನ್ನು ಚರ್ಚಿಸಲು ಆಹ್ವಾನಿಸಿದ್ದರು. ತಮಿಳುನಾಡು ಚುನಾವಣೆಗೆ ಕೆಲಸ ಮುಗಿಸಿದ್ದ ಕನುಗೋಲು ಹೊಸ ಹುದ್ದೆ ಕೈಗೆತ್ತಿಕೊಳ್ಳಲು ಸಿದ್ಧರಾಗಿದ್ದರು. ಸಭೆಯು ದಿನಗಟ್ಟಲೆ ನಡೆಯಿತು, ಆದರೆ ಕೊನೆಗೆ ಕೆಸಿಆರ್ ಪರ ಕೆಲಸ ಮಾಡದಿರಲು ಕನುಗೋಲು ನಿರ್ಧರಿಸಿದ್ದರು. ಇದಾಗಿ ಕೆಲವೇ ದಿನಗಳ ನಂತರ, ಅಚ್ಚರಿಯೆಂಬಂತೆ ಎಐಸಿಸಿಯ ಚುನಾವಣಾ ತಂತ್ರ ಸಮಿತಿಯ ಅಧ್ಯಕ್ಷರಾಗಿ ಕನುಗೋಲು ನೇಮಕವಾದರು.

Advertisement

ಎರಡು ವರ್ಷಗಳ ಬಳಿಕ ಅಂದರೆ ಚುನಾವಣಾ ಫಲಿತಾಂಶ ಪ್ರಕಟವಾದ ಇಂದು ಕೆಸಿಆರ್ ಅಂದು ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಿರಬಹುದು ಮತ್ತೊಂದೆಡೆ ತೆಲಂಗಾಣದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಿದ ಸುನಿಲ್ ಕನುಗೋಲು ಮತ್ತೊಂದು ಪ್ರಾಜೆಕ್ಟ್ ಗೆ ಸಿದ್ದತೆ ನಡೆಸುತ್ತಿರಬಹುದು.

ಕಾಂಗ್ರೆಸ್ ಸೇರಿದ ನಂತರ ಕನುಗೋಲು ತೆಲಂಗಾಣ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳೆರಡರಲ್ಲೂ ಕೆಲಸ ಮಾಡಲು ಪ್ರಾರಂಭಿಸಿದರು. ಕಳೆದ ಮೇನಲ್ಲಿ ಅವರು ತಮ್ಮ ತವರು ರಾಜ್ಯವಾದ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆ ಗೆಲುವು ತಂದುಕೊಡುವಲ್ಲಿ ಶ್ರಮಿಸಿದರು, ಆ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಅವರು ಏಕಕಾಲದಲ್ಲಿ ತೆಲಂಗಾಣದಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಕಾಂಗ್ರೆಸ್ ತುಂಬಾ ಕೆಳಮಟ್ಟಕ್ಕೆ ಕುಸಿದಿತ್ತು, ಪಕ್ಷವು ಚೈತನ್ಯರಹಿತವಾಗಿತ್ತು. ಭರವಸೆಯ ಕೊರತೆಯೂ ಕಾಡುತ್ತಿತ್ತು. ಪಕ್ಷದೊಳಗೆ ಬಣ ರಾಜಕೀಯವೂ ಇತ್ತು. ಕನುಗೋಲು ಇದನ್ನು ಸವಾಲಾಗಿ ಸ್ವೀಕರಿಸಿ ಕೆಸಿಆರ್ ಅವರನ್ನು ಸೋಲಿಸಬಹುದು ಎಂದು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯರಿಗೆ ಮನವರಿಕೆ ಮಾಡಿದ್ದರು.

Advertisement

ಎರಡು ವರ್ಷಗಳ ಹಿಂದೆ ತೆಲಂಗಾಣದ ರಾಜಕೀಯ ಆಟದಲ್ಲಿ ಕಾಂಗ್ರೆಸ್ ಎಲ್ಲಿಯೂ ಇರಲಿಲ್ಲ. ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳುವತ್ತ ಬಿಜೆಪಿ ಸಾಗಿತ್ತು.

ಸದ್ದಿಲ್ಲದೆ ಕೆಲಸ ಮಾಡುತ್ತಾ, ಅವರ ವಿಧಾನಗಳಲ್ಲಿ ನಂಬಿಕೆಯಿಟ್ಟು, ಕನುಗೋಲು ಕರ್ನಾಟಕದಂತೆಯೇ, ಅವರು ನರೇಟಿವ್ ಹೊಂದಿಸಲು ಪ್ರಾರಂಭಿಸಿದರು. ಕೆಸಿಆರ್ ರನ್ನು ಹಿಮ್ಮೆಟ್ಟಿಸಲು ನೋಡಿದರು. ಎಚ್ಚೆತ್ತ ಕೆಸಿಆರ್ ಹೈದರಾಬಾದ್‌ನಲ್ಲಿರುವ ಕನುಗೋಲು ಕಚೇರಿ ಮೇಲೆ ದಾಳಿ ನಡೆಸಿ ಎಲ್ಲಾ ಉಪಕರಣಗಳನ್ನು ವಶಪಡಿಸಿಕೊಂಡರು. ಕನುಗೋಲು ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ಇದಕ್ಕೆ ಬಗ್ಗೆ ಕನುಗೋಲು ಹೊಸ ಕಛೇರಿಯನ್ನು ಆರಂಭಿಸಿ ತಮ್ಮ ಕೆಲಸ ಮುಂದುವರೆಸಿದರು.

ಮಾಧ್ಯಮಗಳ ಎದುರು ಬಾರದೆ, ಫೋಟೋಗಳಿದೆ ಫೋಸ್ ನೀಡದೆ, ಯಾವುದೇ ದೊಡ್ಡ ಚರ್ಚೆಯಿಲ್ಲರದೆ, ಬಹುತೇಕ ಏಕಾಂತವಾಗಿರುವ ಕನುಗೋಲು ಈಗ ಕಾಂಗ್ರೆಸ್‌ ನ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ, ರಾಹುಲ್ ಗಾಂಧಿಗೆ ಚುನಾವಣಾ ವಿಷಯಗಳ ಬಗ್ಗೆ ನೇರವಾಗಿ ಸಲಹೆ ನೀಡುತ್ತಾರೆ.

ತೆಲಂಗಾಣ ಅವರ ಈವರೆಗಿನ ಅತ್ಯುತ್ತಮ ಆಟ ಎನ್ನಬಹುದು. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲೂ ಭಾಗಿಯಾಗಿದ್ದರು. ಕರ್ನಾಟಕ ಚುನಾವಣೆ ಕಠಿಣವಾಗಿತ್ತು. ಆದರೆ ತೆಲಂಗಾಣ ಹೆಚ್ಚು ಸಂಕೀರ್ಣವಾಗಿತ್ತು. ಬಿಜೆಪಿಗೆ ಹೆಚ್ಚಿನ ಮತ ಹಂಚಿಕೆಯಾಗುವುದು ಕೆಸಿಆರ್ ಅಧಿಕಾರದಲ್ಲಿ ಉಳಿಯಲು ಸಹಾಯ ಮಾಡುತ್ತದೆ ಎಂದು ಅರಿತುಕೊಂಡ ಕನುಗೋಲು ಮೊದಲು ರಾಜ್ಯದಲ್ಲಿ ಬಿಜೆಪಿ ಪ್ರಭಾವವನ್ನು ಮಿತಿಗೊಳಿಸಲು ಪ್ರಯತ್ನಿಸಿದರು. ನಂತರ, ಅವರು ತೆಲಂಗಾಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ವೈಎಸ್ಆರ್ ಅವರ ಪುತ್ರಿ ವೈಎಸ್ ಶರ್ಮಿಳಾ ಅವರನ್ನು ನೋಡಿಕೊಂಡರು. ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ಕೂಡ ತೆಲಂಗಾಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಕಣಗೋಲು ಅವರ ಕೆಲಸ ಸುಲಭವಾಯಿತು. ಬಿಜೆಪಿಯನ್ನು ಕೆಳಕ್ಕೆ ತಳ್ಳಿ, ಮತಗಳೂ ಛಿದ್ರವಾಗುವುದನ್ನು ತಡೆಯುವ ಮೂಲಕ ಕೆಸಿಆರ್ ಜತೆ ನೇರ ಹೋರಾಟ ನಡೆಸಿದರು.

ಸುನಿಲ್ ಕನುಗೋಲು ತಂತ್ರಗಾರಿಕೆ ಮತ್ತು ಪರಿಶ್ರಮಕ್ಕೆ ಈಗ ಉತ್ತಮ ಫಲ ಸಿಕ್ಕಿದೆ. ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ಗೆ ಕಾರ್ಯತಂತ್ರ ರೂಪಿಸಿದ ಕೀರ್ತಿಯೂ ಕನುಗೋಲು ಅವರಿಗೆ ಸೇರುತ್ತದೆ.

ಕರ್ನಾಟಕದ ಬಳ್ಳಾರಿಯವರಾದ ಸುನಿಲ್ ಕನುಗೋಲು ಅಮೆರಿಕದಲ್ಲಿ ಉನ್ನತ ಶಿಕ್ಷಣ ಮುಗಿಸಿ ಕೆಲಸದಲ್ಲಿದ್ದರು. ಭಾರತಕ್ಕೆ ಹಿಂದಿರುಗಿದ ನಂತರ, ಗುಜರಾತ್‌ನಲ್ಲಿ ರಾಜಕೀಯ ಕಾರ್ಯತಂತ್ರಗಳಲ್ಲಿ ತೊಡಗಿಸಿಕೊಂಡರು. ಅಸೋಸಿಯೇಷನ್ ಆಫ್ ಬಿಲಿಯನ್ ಮೈಂಡ್ಸ್ (ಎಬಿಎಂ) ಸಂಸ್ಥೆಯನ್ನು ಮುನ್ನಡೆಸಿದರು. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಕಾರ್ಯತಂತ್ರ ರೂಪಿಸಿದವರಲ್ಲಿ ಇವರೂ ಒಬ್ಬರು. 2017 ರ ಆರಂಭದಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರು ಅತ್ಯಂತ ಯಶಸ್ವಿಯಾಗಿ ಬಿಜೆಪಿ ಪ್ರಚಾರವನ್ನು ನಿಭಾಯಿಸಿದ್ದಾರೆ.

ಎಂಕೆ ಸ್ಟಾಲಿನ್ ಅವರೊಂದಿಗೆ 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಅದರ ಪ್ರಚಾರದ ಮೇಲ್ವಿಚಾರಣೆ ಮಾಡಿದರು, ಇದರಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು ಒಟ್ಟು 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದಿತು. ಅವರ ಒಂದು ಕಾಲದ ಸಹೋದ್ಯೋಗಿ ಐಪಿಎಸಿಯ ಪ್ರಶಾಂತ್ ಕಿಶೋರ್, ಪ್ರಚಾರ ಕಾರ್ಯತಂತ್ರ ರೂಪಿಸಲು ಡಿಎಂಕೆ ಪಾಳಯಕ್ಕೆ ಸೇರಿದ ನಂತರ, ಕನುಗೋಲು ಸ್ಟಾಲಿನ್ ಕ್ಯಾಂಪ್ ತೊರೆದು ಬೆಂಗಳೂರಿಗೆ ತೆರಳಿದರು.

ತೆರೆಮರೆಯಲ್ಲಿಯೇ ಕೆಲಸ ಮಾಡುವ ಸುನಿಲ್ ಕನುಗೋಲು ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷವು ಎರಡು ರಾಜ್ಯಗಳಲ್ಲಿ ಅಧಿಕಾರ ಪಡೆಯಲು ನೆರವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next