ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಸೀಸನ್ ನ ಮೊದಲ ನಿಜವಾದ ತವರು ಪಂದ್ಯದಲ್ಲಿ ಸೋಲು ಕಂಡಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂತ್ ಬಳಗಕ್ಕೆ 67 ರನ್ ಅಂತರದ ಸೋಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು ಹೆಡ್ ಮತ್ತು ಅಭಿಷೇಕ್ ಶರ್ಮಾ ಬ್ಯಾಟಿಂಗ್ ಸಾಹಸದಿಂದ 20 ಓವರ್ ಗಳಲ್ಲಿ 266 ರನ್ ಪೇರಿಸಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 199 ರನ್ ಆಲೌಟಾಯಿತು. ಹೆಡ್ ಮತ್ತು ಶರ್ಮಾ ಮೊದಲ ವಿಕೆಟ್ ಗೆ 131 ರನ್ ಜೊತೆಯಾಟ ನಡೆಸಿದರು.
ಇದುವರೆಗೆ ವಿಶಾಖಪಟ್ಟಣದಲ್ಲಿ ತನ್ನ ತವರು ಪಂದ್ಯಗಳನ್ನು ಆಡಿದ್ದ ಡೆಲ್ಲಿ, ಶನಿವಾರ ದಿಲ್ಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲ ಪಂದ್ಯವಾಡಿತು.
ಪಂದ್ಯದ ಬಳಿಕ ಮಾತನಾಡಿದ ಡಿಸಿ ನಾಯಕ ರಿಷಭ್ ಪಂತ್, “ಪವರ್ ಪ್ಲೇ ಸೋಲು ಗೆಲುವಿನ ವ್ಯತ್ಯಾಸ ಎಂದು ನಾನು ಭಾವಿಸುತ್ತೇನೆ. ಮುಂದಿನ ಪಂದ್ಯದಲ್ಲಿ ನಾವು ಹೆಚ್ಚು ಚಿಂತನಶೀಲ ಪ್ರಕ್ರಿಯೆ ಮತ್ತು ಸ್ಪಷ್ಟ ಮನಸ್ಥಿತಿಯೊಂದಿಗೆ ಹಿಂತಿರುಗುತ್ತೇವೆ” ಎಂದು ಹೇಳಿದರು.
ಇಬ್ಬನಿ ಬೀಳುವ ಸಾಧ್ಯತೆಯನ್ನು ನಾವು ತಪ್ಪಾಗಿ ಅಂದಾಜಿಸಿದೆವು ಎಂದು ಪಂತ್ ಹೇಳಿದರು. “ರಾತ್ರಿ ಇಬ್ಬನಿ ಬೀಳುವ ಸಾಧ್ಯತೆ ಇರುವ ಕಾರಣ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡೆವು. ಆದರೆ ಇಬ್ಬನಿ ಬೀಳಲೇ ಇಲ್ಲ. ಒಂದು ವೇಳೆ 220-230 ರನ್ ಗೆ ನಾವು ಅವರನ್ನು ನಿಯಂತ್ರಿಸುತ್ತಿದ್ದರೆ ನಾವು ಪಂದ್ಯದಲ್ಲಿ ಇರುತ್ತಿದ್ದೆವು” ಎಂದರು.
ಸೋಲಿನ ನಂತರ ಹತಾಶರಾಗಿರುವ ರಿಷಬ್ ಪಂತ್ ಅವರನ್ನು ನೋಡಿದ ಕಾಮೆಂಟೇಟರ್ ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್, “ನಾನು ಎಂದಿಗೂ ನೀವು ತಲೆ ತಗ್ಗಿಸಲು ಬಯಸುವುದಿಲ್ಲ, ಇನ್ನೂ ಸಾಕಷ್ಟು ಪಂದ್ಯಗಳಿವೆ. ಹಾಗಾಗಿ ಯಾವಾಗಲೂ ನಗುತ್ತಾ ಇರಿ” ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಪಂತ್, ‘ಆದಷ್ಟು ಪ್ರಯತ್ನಿಸುತ್ತೇನೆ ಸರ್’ ಎಂದರು.