ಮುಂಬೈ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕೇವಲ 202 ರನ್ ಗಳಿಗೆ ಗಂಟುಮೂಟೆ ಕಟ್ಟಿದೆ. ಹಂಗಾಮಿ ನಾಯಕ ಕೆ ಎಲ್ ರಾಹುಲ್ ಮತ್ತು ಅಶ್ವಿನ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರನ ಬ್ಯಾಟ್ ನಿಂದ ನಿರೀಕ್ಷಿತ ರನ್ ಬರಲಿಲ್ಲ.
ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಕಳಪೆ ಫಾರ್ಮ್ ಮತ್ತೆ ಮುಂದುವರಿದಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಪೂಜಾರ ಮೂರು ರನ್ ಗಳಿಸಿದರೆ, ರಹಾನೆ ಗೋಲ್ಡನ್ ಡಕ್ ಗೆ ಬಲಿಯಾದರು.
ಮಾಜಿ ಆಟಗಾರ ಸುನೀಲ್ ಗಾವಸ್ಕರ್ ಈ ಬಗ್ಗೆ ಮಾತನಾಡಿದ್ದು, “ಪೂಜಾರ ಮತ್ತು ರಹಾನೆಗೆ ತಮ್ಮ ಕ್ರಿಕೆಟ್ ಜೀವನ ಉಳಿಸಿಕೊಳ್ಳಲು ಕೇವಲ ಒಂದು ಇನ್ನಿಂಗ್ಸ್ ಬಾಕಿ ಉಳಿದಿದೆ” ಎಂದಿದ್ದಾರೆ.
ಇದನ್ನೂ ಓದಿ:ಜೋಹಾನ್ಸ್ ಬರ್ಗ್ ಟೆಸ್ಟ್: ರಬಾಡಾ, ಅಂಪೈರ್ ಗೆ ಕ್ಷಮೆ ಕೇಳಿದ ಕೆ.ಎಲ್.ರಾಹುಲ್
“ತಂಡದಲ್ಲಿ ಅವರಿಬ್ಬರ ಸ್ಥಾನದ ಕುರಿತು ಈಗಾಗಲೇ ಮಾತುಗಳು ಆರಂಭವಾಗಿದೆ. ಬಹುಶಃ ಇಬ್ಬರಿಗೂ ಇನ್ನು ಒಂದು ಇನ್ನಿಂಗ್ಸ್ ಉಳಿದಿದೆ. ತಮ್ಮ ಕ್ರಿಕೆಟ್ ಜೀವನವನ್ನು ಉಳಿಸಿಕೊಳ್ಳಲು ಪೂಜಾರ ಮತ್ತು ರಹಾನೆ ಆ ಒಂದು ಇನ್ನಿಂಗ್ಸ್ ನಲ್ಲಿ ರನ್ ಗಳಿಸಬೇಕಾಗಿದೆ” ಎಂದು ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಪೂಜಾರ ಮತ್ತು ರಹಾನೆ ಇಬ್ಬರೂ ಕಳಪೆ ಫಾರ್ಮ್ ನಲ್ಲಿದ್ದಾರೆ. ಪೂಜಾರ 2019ರಿಂದ ಒಂದೂ ಶತಕ ಗಳಿಸಿಲ್ಲ. ಈ ಪಂದ್ಯದಲ್ಲಿ ವಿರಾಟ್ ಬೆನ್ನುನೋವಿನ ಕಾರಣದಿಂದ ಆಡಲಿಳಿಯಲಿಲ್ಲ. ಹೀಗಾಗಿ ವಿರಾಟ್ ಬದಲಿಗೆ ಹನುಮ ವಿಹಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂದಿನ ಪಂದ್ಯದಲ್ಲಿ ವಿರಾಟ್ ಗಾಗಿ ರಹಾನೆ ಅಥವಾ ಪೂಜಾರ ಸ್ಥಾನ ಕಳೆದುಕೊಳ್ಳಬಹುದು.