Advertisement
1971ರ ವೆಸ್ಟ್ ಇಂಡೀಸ್ ಪ್ರವಾಸ ಭಾರತದ ಪಾಲಿಗೆ ಐತಿಹಾಸಿಕ. ಆ ಭಯಾನಕ ವೇಗಿಗಳ ನಾಡಿನಲ್ಲಿ ಗಾವಸ್ಕರ್ ಎಂಬ ಧೈರ್ಯಶಾಲಿ ಬ್ಯಾಟ್ಸ್ ಮನ್ ಒಬ್ಬನ ಉದಯವಾಗುತ್ತದೆ. ಗಾವಸ್ಕರ್ ಬರೋಬ್ಬರಿ 774 ರನ್ ವಿಶ್ವದಾಖಲೆಯೊಂದಿಗೆ ಕ್ರಿಕೆಟ್ ಜಗತ್ತಿ ನಲ್ಲಿ ಸಂಚಲನ ಮೂಡಿಸುತ್ತಾರೆ. ಆಗ ರೋಹನ್ ಕನ್ಹಾಯ್ ಎದುರಾಳಿ ತಂಡದ ಪ್ರಧಾನ ಬ್ಯಾಟ್ಸ್ ಮನ್. ಯುವ ಗಾವಸ್ಕರ್ ಆಟಕ್ಕೆ ಅವರು ಫಿದಾ ಆಗಿದ್ದರು. ಇದನ್ನು ನೆನಪಿಸಿಕೊಂಡ “ಸನ್ನಿ’, ತನ್ನ ಶತಕಕ್ಕೆ ಕನ್ಹಾಯ್ ಹೇಗೆ ಸ್ಫೂರ್ತಿ ತುಂಬಿದ್ದರು ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
“ಅದು ನನ್ನ ಮೊದಲ ಸರಣಿ. ನಾನು ಕೆಟ್ಟ ಹೊಡೆತ ಬಾರಿಸಿದಾಗಲೆಲ್ಲ, ಓವರ್ ಮುಗಿದೊಡನೆ ರೋಹನ್ ಕನ್ಹಾಯ್ ನನ್ನ ಬಳಿ ಬರುತ್ತಿದ್ದರು. ಸ್ಲಿಪ್ ವಿಭಾಗದತ್ತ ಕರೆದುಕೊಂಡು ಹೋಗಿ, ಕೀಪರ್‌ಗೆ ಕೇಳದ ರೀತಿಯಲ್ಲಿ “ಸ್ವಲ್ಪ ತಾಳ್ಮೆಯಿಂದಿರು, ನಿನಗೆ ಶತಕದ ಆಸೆ ಇಲ್ಲವೇ’ ಎಂದು ನನ್ನ ಕಿವಿಯಲ್ಲಿ ಉಸುರುತ್ತಿದ್ದರು. ಅವರೋ ಎದುರಾಳಿ ಆಟಗಾರ. ನನಗೆ ಈ ರೀತಿ ಮಾರ್ಗದರ್ಶನ ನೀಡುವುದೆಂದರೆ, ನನ್ನ ಶತಕವನ್ನು ಕಾಣುವ ಆಸೆ ವ್ಯಕ್ತಪಡಿಸುವುದೆಂದರೆ ನಿಜಕ್ಕೂ ಕಲ್ಪಿಸಿಕೊಳ್ಳಲಿಕ್ಕೂ ಆಗದ ಸಂಗತಿಯಾಗಿತ್ತು’ ಎಂದು ಗಾವಸ್ಕರ್ 5 ದಶಕಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.