Advertisement

ಉದ್ಘಾಟನಾ ಪಂದ್ಯದಲ್ಲೇ ಭಾರತದ ಆಟ: ಗಾವಸ್ಕರ್‌ ಬ್ಯಾಟಿಂಗ್‌ ಅಭ್ಯಾಸ!

09:02 AM May 18, 2019 | keerthan |

ವಿಶ್ವಕಪ್‌ ಚರಿತ್ರೆಯ ಉದ್ಘಾಟನಾ ಪಂದ್ಯದಲ್ಲೇ ಭಾರತ ಆಡಲಿಳಿದಿತ್ತು ಎಂಬುದು ಹೆಮ್ಮೆಯ ಸಂಗತಿ. 1975ರ ಜೂನ್‌ 7ರಂದು ಆತಿಥೇಯ ಇಂಗ್ಲೆಂಡ್‌ ಮತ್ತು ಭಾರತ ತಂಡಗಳು ಐತಿಹಾಸಿಕ ಲಾರ್ಡ್ಸ್‌ ನಲ್ಲಿ ಕಣಕ್ಕಿಳಿಯುವುದರೊಂದಿಗೆ ವಿಶ್ವಕಪ್‌ಗೆ ಅಧಿಕೃತ ಚಾಲನೆ ಲಭಿಸಿತು.

Advertisement

ಏಕದಿನ ಮಟ್ಟಿಗೆ ಆಗ ಎಲ್ಲವೂ ಅನನುಭವಿ ತಂಡಗಳೇ. ಭಾರತ ಅದುವರೆಗೆ ಕೇವಲ 3 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿತ್ತು. ಹೀಗಾಗಿ ಸೀಮಿತ ಓವರ್‌ಗಳ ಪಂದ್ಯದ ಪರಿಭಾಷೆ, ಆಟದ ಶೈಲಿ… ಯಾವುದನ್ನೂ ಅರ್ಥೈಸಿಕೊಂಡಿರಲಿಲ್ಲ. ಭಾರತ ಆಗಿನ್ನೂ ಟೆಸ್ಟ್‌ ಗುಂಗಿನಲ್ಲೇ ಇತ್ತು. ಇದಕ್ಕೆ ಉದ್ಘಾಟನಾ ಪಂದ್ಯದ ಫ‌ಲಿತಾಂಶವೇ ಸಾಕ್ಷಿ.

202 ರನ್ನುಗಳ ಭಾರೀ ಸೋಲು ಈ ಪಂದ್ಯದಲ್ಲಿ ಭಾರತಕ್ಕೆ ಎದುರಾದದ್ದು 202 ರನ್ನುಗಳ ಸೋಲು! ಮೈಕ್‌ ಡೆನ್ನಿಸ್‌ ನೇತೃತ್ವದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ನಡೆಸಿ 4 ವಿಕೆಟಿಗೆ 344 ರನ್‌ ಪೇರಿಸಿತು. ಭಾರತದ ಸ್ಕೋರ್‌ 60 ಓವರ್‌ಗಳಲ್ಲಿ 3 ವಿಕೆಟಿಗೆ 132 ರನ್‌!

174 ಎಸೆತಗಳಿಂದ 36 ರನ್‌! ಆರಂಭಕಾರ ಸುನೀಲ್‌ ಗಾವಸ್ಕರ್‌ ಪೂರ್ತಿ 60 ಓವರ್‌ಗಳ ತನಕ ಕ್ರೀಸ್‌ ಆಕ್ರಮಿಸಿ ಕೊಂಡು, 174 ಎಸೆತಗಳಿಂದ ಔಟಾಗದೆ 36 ರನ್‌ ಮಾಡುವ ಮೂಲಕ ಭಾರತದ “ಏಕದಿನ ಸಾಮರ್ಥ್ಯ’ವನ್ನು ಜಗಜ್ಜಾಹೀರು ಮಾಡಿದರು! 59 ಎಸೆತಗಳಿಂದ 37 ರನ್‌ ಮಾಡಿದ ಗುಂಡಪ್ಪ ವಿಶ್ವನಾಥ್‌ ಅವರದೇ ಭಾರತದ ಸರದಿಯ ಅತ್ಯಧಿಕ ವೈಯಕ್ತಿಕ ಗಳಿಕೆ. ಇಂಗ್ಲೆಂಡ್‌ ಪರ ಆರಂಭಕಾರ ಡೆನ್ನಿಸ್‌ ಅಮಿಸ್‌ 147 ಎಸೆತಗಳಿಂದ 137 ರನ್‌ ಬಾರಿಸಿ ವಿಶ್ವಕಪ್‌ ಇತಿಹಾಸದ ಮೊದಲ ಶತಕಕ್ಕೆ ಸಾಕ್ಷಿಯಾದರು. ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ ಉರುಳಿಸಿದ ಸಾಧಕನೆಂಬ ಹೆಗ್ಗಳಿಕೆ ಮೊಹಿಂದರ್‌ ಅಮರನಾಥ್‌ ಅವರದಾಯಿತು.

ಗಾವಸ್ಕರ್‌ ಬ್ಯಾಟಿಂಗ್‌ ಅಭ್ಯಾಸ!
ಉದ್ಘಾಟನಾ ಪಂದ್ಯದಲ್ಲಿ ಸುನೀಲ್‌ ಗಾವಸ್ಕರ್‌ ಅವರ ಆಮೆಗತಿಯ ಆಟ ಕಂಡು ರೋಸಿಹೋದ ಅಭಿಮಾನಿಯೊಬ್ಬ ಅಂಗಳಕ್ಕೆ ಹಾರಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ಸಂಭವಿಸಿತ್ತು. ಬಳಿಕ ತಮ್ಮ ಆಟದ ಕುರಿತು ಪ್ರತಿಕ್ರಿಯಿಸಿದ ಗಾವಸ್ಕರ್‌, “ಇಂಗ್ಲೆಂಡಿನ ಆ ಬೃಹತ್‌ ಮೊತ್ತವನ್ನು ಹಿಂದಿಕ್ಕಲು ನಮ್ಮಿಂದ ಹೇಗೂ ಆಗುತ್ತಿರಲಿಲ್ಲ. ಹೀಗಾಗಿ ನಾನು ಬ್ಯಾಟಿಂಗ್‌ ಪ್ರ್ಯಾಕ್ಟೀಸ್‌ ನಡೆಸಿದೆ’ ಎಂದಿದ್ದರು!

Advertisement

ಭಾರತ ತಂಡ
ಎಸ್‌. ವೆಂಕಟರಾಘವನ್‌ (ನಾಯಕ), ಸುನೀಲ್‌ ಗಾವಸ್ಕರ್‌, ಅಂಶುಮನ್‌ ಗಾಯಕ್ವಾಡ್‌,  ಏಕನಾಥ್‌ ಸೋಲ್ಕರ್‌, ಜಿ.ಆರ್‌. ವಿಶ್ವನಾಥ್‌, ಬೃಜೇಶ್‌ ಪಟೇಲ್‌, ಮೊಹಿಂದರ್‌ ಅಮರನಾಥ್‌,  ಫ‌ರೂಖ್‌ ಇಂಜಿನಿಯರ್‌, ಅಬಿದ್‌ ಅಲಿ, ಮದನ್‌ಲಾಲ್‌, ಕರ್ಸನ್‌ ಘಾವ್ರಿ, ಬಿಶನ್‌ ಸಿಂಗ್‌ ಬೇಡಿ.

Advertisement

Udayavani is now on Telegram. Click here to join our channel and stay updated with the latest news.

Next