ನವದೆಹಲಿ: ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ನಿವೃತ್ತಿಯ ಸುಳಿವು ನೀಡಿದ್ದಾರೆಯೇ? ಹೀಗೊಂದು ಅನುಮಾನ ಮೂಡಿದೆ.
ಸಮಕಾಲೀನ ವಿಶ್ವ ಫುಟ್‌ಬಾಲಿಗರ ಪೈಕಿ 2ನೇ ಗರಿಷ್ಠ ಗೋಲು ಬಾರಿಸಿರುವ ಸಾಧನೆ ಮಾಡಿರುವ ಚೆಟ್ರಿ ಆಡಿರುವ ಮಾತುಗಳು ಈ ಅನುಮಾನಗಳಿಗೆ ಕಾರಣ.
ಶುಕ್ರವಾರ ಬೆಂಗಳೂರು ತಂಡವನ್ನು ಐಎಸ್‌ಎಲ್ ಪಂದ್ಯದಲ್ಲಿ ಗೋವಾ ವಿರುದ್ಧ ಗೆಲ್ಲಿಸಿದ ನಂತರ, ಚೆಟ್ರಿ ಒಂದಷ್ಟು ಮಾತನಾಡಿದ್ದರು. ಆ ವೇಳೆ, ನನಗಿನ್ನು ಬಹಳ ಅಂತಾರಾಷ್ಟ್ರೀಯ ಪಂದ್ಯವಾಡುವ ಅವಕಾಶವಿಲ್ಲವೆನ್ನುವುದು ಗೊತ್ತಿದೆ ಎಂದಿದ್ದರು. ಇದು ಅವರು ನಿವೃತ್ತಿಯಾಗುವ ಚಿಂತನೆ ಮಾಡಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಸಿತು.
ಸದ್ಯ ಅವರಿಗೆ 35 ವರ್ಷ ಮಾತ್ರ. ಅವರ ಲಯದಲ್ಲೂ ಕೊರತೆಯಿಲ್ಲ. ಹೀಗಿದ್ದಾಗ ಇಂತಹ ಮಾತನ್ನು ಅವರು ಏಕೆ ಹೇಳಬೇಕು ಎಂಬ ಕುತೂಹಲವೂ ಇದೆ. ಆದರೆ ಇನ್ನೂ ಕನಿಷ್ಠ 3 ವರ್ಷ ಆಡುವ ಮನಸ್ಸಿದೆ ಎಂಬ ಸುಳಿವನ್ನೂ ನೀಡಿದ್ದಾರೆ.
2023ರಲ್ಲಿ ಚೀನಾದಲ್ಲಿ ನಡೆಯುವ ಏಷ್ಯಾ ಫುಟ್‌ಬಾಲ್ ಕೂಟಕ್ಕೆ ಭಾರತ ಅರ್ಹವಾಗುವಂತೆ ಮಾಡುವುದು ತನ್ನ ಗುರಿ. ಆದ್ದರಿಂದ ತಾನಿನ್ನೂ ಕಷ್ಟಪಡ ಬೇಕಾಗಿದೆ ಎಂದಿದ್ದಾರೆ. ಹಾಗಾದರೆ 2023ರವರೆಗೆ ಅವರು ತಂಡದಲ್ಲಿ ಮುಂದುವರಿಯುವ ಆಸಕ್ತಿ ಹೊಂದಿದ್ದಾರೆಯೇ? ಎಂಬ ಪ್ರಶ್ನೆಯೂ ಇದೆ.