Advertisement

ಉಕ್ರೇನ್,ರಷ್ಯಾ ಯುದ್ಧ:ಕರ್ನಾಟಕದಲ್ಲಿ ಸೂರ್ಯಕಾಂತಿ ಎಣ್ಣೆ ಬೆಲೆ ಭಾರೀ ಹೆಚ್ಚಳಕ್ಕೆ ಕಾರಣವೇನು

12:42 PM Mar 07, 2022 | Team Udayavani |

ಬೆಂಗಳೂರು: ರಷ್ಯಾ, ಉಕ್ರೇನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದರೆ, ಮತ್ತೊಂದೆಡೆ ಅದರ ಪರಿಣಾಮ ಕರ್ನಾಕಟದ ಮೇಲೂ ಬೀರುವಂತಾಗಿದ್ದು, ಕಳೆದ ಒಂದು ವಾರದಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿರುವುದಾಗಿ ವರದಿಯೊಂದು ತಿಳಿಸಿದೆ.

Advertisement

ಇದನ್ನೂ ಓದಿ:ಪ್ಯಾಲೆಸ್ತೀನ್‌ ನಲ್ಲಿ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಮುಕುಲ್ ಆರ್ಯ ಶವವಾಗಿ ಪತ್ತೆ

ಭಾರತ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಉಕ್ರೇನ್ ನಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದೀಗ ರಷ್ಯಾ, ಉಕ್ರೇನ್ ನಡುವಿನ ಯುದ್ಧದಿಂದಾಗಿ ಸೂರ್ಯಕಾಂತಿ ಎಣ್ಣೆ ಸರಬರಾಜು ಮೇಲೆ ಪರಿಣಾಮ ಬೀರಿದ್ದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ನಮ್ಮ ರಾಜ್ಯ ಸೂರ್ಯಕಾಂತಿ ಎಣ್ಣೆಯನ್ನು ಅತೀ ಹೆಚ್ಚ ಬಳಕೆ ಮಾಡುವ ರಾಜ್ಯಗಳಲ್ಲಿ ಒಂದಾಗಿದೆ ಎಂದು ಕರ್ನಾಟಕದ ಆಯಿಲ್ ಫೆಡರೇಶನ್ ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದಡಿಯಲ್ಲಿ ಅಂದಾಜು ಶೇ.15ರಷ್ಟು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ ಉಕ್ರೇನ್ ಪ್ರಮುಖವಾಗಿದೆ ಎಂದು ತಿಳಿಸಿದೆ.

Advertisement

ಒಂದು ತಿಂಗಳಲ್ಲಿ ಕರ್ನಾಟಕ 25,000 ರಿಂದ 30,000 ಟನ್ ಸೂರ್ಯಕಾಂತಿ ಎಣ್ಣೆಯನ್ನು ಬಳಕೆ ಮಾಡುತ್ತದೆ. ಆದರೆ ಈಗ ಸೂರ್ಯಕಾಂತಿ ಎಣ್ಣೆಯ ಪೂರೈಕೆಯಲ್ಲಿ ಕೊರತೆ ಉಂಟಾದ ಪರಿಣಾಮ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ ಸೂರ್ಯಕಾಂತಿ ಎಣ್ಣೆ ಅಭಾವ ತಲೆದೋರಲಿದೆ ಎಂಬ ಆತಂಕದಿಂದಾಗಿ ಕಳೆದ ಎರಡು ದಿನಗಳಲ್ಲಿ ಚಿಲ್ಲರೆ ವ್ಯಾಪಾರಿಗಳು, ಸಗಟು ಖರೀದಿದಾರರು, ಹೋಟೆಲ್ ಮಾಲೀಕರು ಸೂರ್ಯಕಾಂತಿ ಎಣ್ಣೆಯನ್ನು ದಾಸ್ತಾನು ಮಾಡುತ್ತಿರುವುದಾಗಿ ವರದಿ ವಿವರಿಸಿದೆ. ಒಂದು ಲೀಟರ್ ಸೂರ್ಯಕಾಂತಿ ಎಣ್ಣೆಯ ಸಗಟು ಬೆಲೆ 40 ರೂಪಾಯಿ ಹೆಚ್ಚಳವಾಗಿದೆ.

5 ಲೀಟರ್ ಸೂರ್ಯಕಾಂತಿ ಎಣ್ಣೆಯ ಬೆಲೆ 650 ರೂಪಾಯಿಯಿಂದ 800 ರೂಪಾಯಿಗೆ ಏರಿಕೆಯಾಗಿದೆ. ಇದು ಕಳೆದ ಒಂದು ವಾರದಿಂದ ಬರೋಬ್ಬರಿ 100 ರೂಪಾಯಿ ದರ ಹೆಚ್ಚಳವಾದಂತಾಗಿದೆ. ಒಂದು ಲೀಟರ್ ಸೂರ್ಯಕಾಂತಿ ಎಣ್ಣೆಯ ಬೆಲೆ ಚಿಲ್ಲರೆ ದರ 130ಯಿಂದ 220 ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗುವ ಪರಿಣಾಮದ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದರು. ಅಲ್ಲದೇ ಕಳ್ಳದಾಸ್ತಾನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿರುವುದಾಗಿ ವರದಿ ವಿವರಿಸಿದೆ.

ಪ್ರಸ್ತುತ ಕರ್ನಾಟಕದಲ್ಲಿ ಖಾದ್ಯ ತೈಲದ ಕೊರತೆ ಇಲ್ಲ. ಈಗಾಗಲೇ ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರ ದಾಸ್ತಾನು ಪ್ರಮಾಣವನ್ನು ಕಡಿಮೆಗೊಳಿಸಿದ್ದೇವೆ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಡೆಕ್ಕನ್ ಹೆರಾಲ್ಡ್ ಗೆ ತಿಳಿಸಿದ್ದಾರೆ.

ಆದರೆ ಮುಂದಿನ ದಿನಗಳಲ್ಲಿ ಸೂರ್ಯಕಾಂತಿ ಎಣ್ಣೆಗೆ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಿಂದ ಕೆಲವು ವ್ಯಾಪಾರಿಗಳು ಕಳ್ಳ ದಾಸ್ತಾನು ಮಾಡುತ್ತಿರುವ ಬಗ್ಗೆ ಶಂಕೆ ಇದ್ದು, ಒಂದು ವೇಳೆ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದು, ದಾಳಿಯ ವೇಳೆ ಪತ್ತೆಯಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂಬುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next