ಅಚಾನಕ್ ಆಗಿ ಮೇಲಿನ ಕೊಂಬೆಯ ಕಡೆ ನನ್ನ ದೃಷ್ಟಿ ಹೊರಳಿತು. ಅಲ್ಲಿ ನನಗಾಗೇ ಮಾವಿನಮರ ಎರಡೇ ಎರಡು ಮಾವಿನಕಾಯಿಗಳನ್ನು ತೂಗಾಡಿಸಿಕೊಂಡು “ಕರೆದರೂ ಕೇಳದೇ….’ ಅಂತ ಹಾಡುತ್ತಿರುವ ಹಾಗೆ ಅನಿಸಿತು.
ವಾರಕ್ಕೊಂದೇ ಭಾನುವಾರ ಅಲ್ವಾ….! ಅದಕ್ಕೇ ಬೆಳಗ್ಗೆ ಬೇಗ ಎದ್ದು , ಒಂದು ಸ್ಟ್ರಾಂಗ್ ಕಾಫಿ ಕುಡ್ದು, ಚಳೀನ ಓಡಿಸಿ, ಬೆಳಗಾಗೋದನ್ನೇ ಕಾದು, ಒಂದು ರೌಂಡ್ ಸುತ್ತಾಡೋಣ ಅಂತ ಹೊರಟೆ. ಹಾಗೇ ಹೋಗ್ತಾ ಹೋಗ್ತಾ ಇರಬೇಕಾದ್ರೆ ಘಂ… ಅಂತ ಮಾವಿನ ಹೂಗಳ ಪರಿಮಳ ಗಾಳೀಲಿ ತೇಲ್ತಾ ತೇಲ್ತಾ ನನ್ನ ಬಳಿಗೇ ಬಂತು. ನನ್ನ ಕಾಲುಗಳ್ಳೋ, ಅಲ್ಲಿ ಸೆಳೆವ ಅಯಸ್ಕಾಂತ ಇದ್ಯೆàನೋ ಅನ್ನೋ ಹಾಗೆ, ತಾವಾಗೇ ಆ ಕಡೆ ನಡೆಯತೊಡಗಿದವು.
ಆಹಾ! ಎಂಥ ಚಂದ ಅಂತೀರಿ ಆ ಹೂ ತೇರು! ಮೈಯೆಲ್ಲ ಸೊಬಗರಳಿಸಿ ನಿಂತಿದ್ದ ಅದನ್ನು ಕಣ್ಣಲ್ಲೂ, ಮೊಬೈಲಲ್ಲೂ ತುಂಬ್ಕೊಂಡು, ಕಡಲೆಕಾಳಿನಷ್ಟೇ ಪುಟಾಣಿಯಾಗಿರುವ ಹೀಚುಗಾಯಿಗಳಿಗೆ ದೂರದಿಂದಲೇ ಮುದ್ದಿಸಿ, ಹೊರಡ್ತಾ ಇರಬೇಕಾದ್ರೆ …. ಅಚಾನಕ್ ಆಗಿ ಮೇಲಿನ ಕೊಂಬೆ ಕಡೆ ನನ್ನ ದೃಷ್ಟಿ ಹೊರಳಿತು. ಅಲ್ಲಿ ನನಗಾಗೇ ಮಾವಿನಮರ ಎರಡೇ ಎರಡು ಮಾವಿನಕಾಯಿಗಳನ್ನು ತೂಗಾಡಿಸಿಕೊಂಡು “ಕರೆದರೂ ಕೇಳದೇ….’ ಅಂತ ಹಾಡುತ್ತಿರುವ ಹಾಗೆ ಅನಿಸಿತು. ಈ ವರ್ಷದ ಹೊಸ ಮಾವಿನಕಾಯಿ ಸಿಗಲು ಇನ್ನೂ ಒಂದು ತಿಂಗಳಾದರೂ ಬೇಕು ಅಂತ ಲೆಕ್ಕ ಹಾಕುತ್ತಿದ್ದ ನನಗೆ, ದೇವರೇ ಪ್ರತ್ಯಕ್ಷ ಆಗಿ ವರ ಕೊಡ್ತಾ ಇರೋ ಹಾಗೆ ಕಾಣಿಸಿತು. ಭಕ್ತಿಯಿಂದ…. ಕೆಂಜಿರುವೆ ಕಡಿಯದಂತೆ ಜಾಗ್ರತೆಯಿಂದ… ನಿಧಾನವಾಗಿ ಆ ವರಪ್ರಸಾದವನ್ನು ತಗೊಂಡು ಕೃತಾರ್ಥಳಾಗಿ ಮನೆ ಸೇರಿದೆ.
ಸ್ನಾನ, ಪೂಜೆ, ದೇವರಿಗೆ ನೈವೇದ್ಯ, ಫಟಾಫಟ್ ಆಯಿತು. ಇನ್ನು ಜಠರಾಗ್ನಿಗೆ ಸಮರ್ಪಣೆ ತಾನೇ! ಅವಲಕ್ಕಿಯನ್ನು ಮೊಸರಲ್ಲಿ ನೆನೆಸಿ, ರವಾ ಸೇರಿಸಿ, ದಿಢೀರ್ ಇಡ್ಲಿ ಮಾಡಲು ಚೂರೂ ಬೇಜಾರಾಗಲೇ ಇಲ್ಲ. ಅಷ್ಟರಲ್ಲಿ, ಕಾಯಿತುರಿ ಜೊತೆ ಮಾವಿನತುರಿ, ಹಸಿಮೆಣಸು, ಕರಿಬೇವು …. ಎಲ್ಲ ಮಿಕ್ಸಿ ಜಾರೊಳಗೆ ಕೂತು ಗರ್ರ…. ಅನ್ಸೋದನ್ನೇ ಕಾಯ್ತಾ ಇದು. ಚಟ್ನಿಗೊಂದು ಇಂಗಿನ ಒಗ್ಗರಣೆ ಹಾಕಿ, ಇಡ್ಲಿ ಮೇಲೆ ತುಪ್ಪ ಹಾಕಿ ತಟ್ಟೇಲಿಟ್ರೆ … ಅಬ್ಟಾ! ಏನವಸರವಪ್ಪ…ಒಂದರ ಹಿಂದೊಂದು ನಾ ಮೊದಲು ತಾ ಮೊದಲು ಅಂತ ಬಾಯೊಳ ನುಗ್ಗಿ ಗಂಟಲಲ್ಲಿಳಿದೇ ಬಿಡೋದಾ? ಸಾಕು ಸಾಕು… ಇಷ್ಟೊಂದು ಉತ್ಸಾಹ ಒಳ್ಳೇದಲ್ಲ ಅಂತ ಕೊನೆಗೂ ನಾನೇ ಸುಮ್ಮನಾಗಿಸಬೇಕಾಯ್ತು. ಇಷ್ಟೆಲ್ಲ ಆದಾಗ ಈ ಲೆಮನ್ ಗ್ರಾಸ್ ಉಂಟಲ್ಲ…. ಅದು ಚಹಾ ಮಾಡು… ಚಹಾ ಮಾಡು… ನಾನೂ ಇಡ್ಲಿ ಚಟ್ನಿ ಹಿಂದೆ ಹೋಗಬೇಕು ಅಂತ ಹಟ ಮಾಡತೊಡಗಿತು. ಬೇಡ ಅಂದ್ರೆ ಕೇಳ್ಳೋ ಬುದ್ಧೀನೇ ಇಲ್ಲ ಇದಕ್ಕೆ. ಕೊನೆಗೂ ನಾನೇ ಸೋಲಬೇಕಾಯ್ತು.
ಈಗ…ಎಲ್ಲಿ ಹೋಗಿದ್ದು? ಮಾವಿನಮರ ವರ ಕೊಟ್ಟಿ¨ªೆಲ್ಲಿ? ಅಂತೆಲ್ಲ ಪ್ರಶ್ನೆ ಕೇಳಬೇಡಿ. ಬೆಳಗ್ಗೆ ಬೇಗ ಎದ್ದಿದ್ದಲ್ವ….. ನನಗೀಗ ಜೋರು ನಿದ್ದೆ ಬರ್ತಿದೆ. ಗೊತ್ತಾಯ್ತಾ! ಅಂತ ನಾನು ಹೇಳ್ತಾ ಹೇಳ್ತಾ…..ಮೊಬೈಲ್ ಸ್ವಿಚ್ ಆಫ್ ಮಾಡಿ ಹಾಗೇ ಈಸಿ ಚೇರಲ್ಲಿ ಒರಗ್ಬಿಟ್ಟೆ.
ಇಷ್ಟೇನಾ… ಅಂತ ನೀವು ರಾಗ ಎಳೆದ್ರೆ ನಾನೇನೂ ಬೇಜಾರು ಮಾಡ್ಕೊಳ್ಳಲ್ಲ ಆಯ್ತಾ…. !
-ಭಾವನಾ ದಾಮ್ಲೆ