Advertisement

ಭಾನುವಾರ ಜನಸಾಗರ

11:54 AM Jan 22, 2018 | Team Udayavani |

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ 207ನೇ ಫ‌ಲಪುಷ್ಟ ಪ್ರದರ್ಶನಕ್ಕೆ ಭಾನುವಾರ ಜನಸಾಗರ ಹರಿದು ಬಂದಿದ್ದು, ಒಂದೇ ದಿನ 50 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿ ಫ‌ಲಪುಷ್ಪ ಪ್ರದರ್ಶವನ್ನು ಕಣ್ತುಂಬಿಕೊಂಡಿದ್ದಾರೆ. 

Advertisement

ಶುಕ್ರವಾರ ಆರಂಭವಾದ ಫ‌ಲಪುಷ್ಪ ಪ್ರದರ್ಶನಕ್ಕೆ ವಾರಾಂತ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಲಾಲ್‌ಬಾಗ್‌ ಜನರಿಂದ ಕಿಕ್ಕಿರಿದಿತ್ತು. ಪ್ರದರ್ಶನಕ್ಕೆ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದ ವಿಶೇಷವಾಗಿತ್ತು. 

ಗಾಜಿನಮನೆಗೆ ಹೋಗುವ ಎರಡೂ ಇಕ್ಕೆಲಗಳಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕೆತ್ತನೆ ಶಿಬಿರ ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿದ್ದು, ಪ್ರದರ್ಶನಕ್ಕೆ ಬಂದವರು ಹತ್ತಾರು ನಿಮಿಷ ಮರಕ್ಕೆ ಕಲಾಕೃತಿಯ ರೂಪ ನೀಡುತ್ತಿರುವ ಕಾರ್ಯವನ್ನು ನೋಡುತ್ತಾ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. 

ಕೆತ್ತನೆ ಶಿಬಿರದಲ್ಲಿ ಮುಂಬೈ, ಬರೋಡ, ಶಾಂತಿಕೇತನ, ಹೈದರಾಬಾದ್‌ ಸೇರಿ ಸುಮಾರು 60ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದು, ಹಲವಾರು ಅಪರೂಪ ಕಲಾಕೃತಿಗಳ ಕೆತ್ತನೆಯಲ್ಲಿ ತೊಡಗಿದ್ದರು. ಲಾಲ್‌ಬಾಗ್‌ನಲ್ಲಿ ಮಳೆ-ಗಾಳಿಗೆ ಧರೆಗುರುಳಿರುವ ಸುಮಾರ 250 ವರ್ಷಗಳ ಹಳೆಯ ಮರಗಳನ್ನು ಸುಂದರ ಕಲಾಕೃತಿಗಳನ್ನಾಗಿಸುವ ಕಾರ್ಯದಲ್ಲಿ ಕಲಾವಿದರು ತೊಡಗಿದ್ದಾರೆ.

ಅದರಂತೆ ಮರಗಳಲ್ಲಿ ಗರುಡ, ಮೊಸಳೆ, ಪರಿವಾಳ, ಶ್ವಾನ, ಆನೆ ಹಾಗೂ ಧ್ಯಾನಮಗ್ನವಾಗಿರುವ ಗೌತಮ ಬುದ್ಧನ ಕಲಾಕೃತಿಗಳು ಮೂಡಿಸುತ್ತಿದ್ದ ದೃಶ್ಯ ನೋಡಲು ಪ್ರವಾಸಿಗರು ಮುಗಿಬಿದ್ದರು. 

Advertisement

ಮಲ್ಲಿಕಾರ್ಜುನ ಖರ್ಗೆ ಭೇಟಿ: ಸಸ್ಯಕಾಶಿಗೆ ಭಾನುವಾರ ಅಚ್ಚರಿಯ ಅತಿಥಿಯಾಗಿ ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿ, ಬಾಹುಬಲಿ ಕೇಂದ್ರಿತವಾದ ಫ‌ಲಪುಷ್ಪ ಪ್ರದರ್ಶನ ಕಂಡು ಸಂತಸ ವ್ಯಕ್ತಪಡಿಸಿದರು.

ಜತೆಗೆ ಉದ್ಯಾನದ ಪ್ರತಿಯೊಂದು ಸ್ಥಳಕ್ಕೂ ಭೇಟಿ ಅಲ್ಲಿ ಅಳವಡಿಸಲಾಗಿದ್ದ ಹೂವುಗಳ ವಿಶೇಷತೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತ್ಯಾಗಮೂರ್ತಿ ಬಾಹುಬಲಿಯನ್ನು ಕೇಂದ್ರವಾಗಿಸಿಕೊಂಡು ಫ‌ಲಪುಷ್ಪ ಪ್ರದರ್ಶನ ಏರ್ಪಡಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಫ‌ಲಪುಷ್ಪ ಪ್ರದರ್ಶನ ಸುಂದರವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಇದೇ ಮಾದರಿಯ ಸಣ್ಣ ಸಣ್ಣ ಫ‌ಲಪುಷ್ಪ ಪ್ರದರ್ಶನಗಳನ್ನು ರಾಜ್ಯದ ಎಲ್ಲ ಕಡೆಗಳಲ್ಲಿ ಆಯೋಜಿಸಿದರೆ ಗ್ರಾಮೀಣ ಭಾಗದ ಜನರಿಗೂ ಪ್ರದರ್ಶನ ಕುರಿತು ಮಾಹಿತಿ ದೊರೆಯುತ್ತದೆ. ಆ ಮೂಲಕ ಯಾವ ರೀತಿಯ ತೋಟಗಾರಿಕಾ ಬೆಳೆಗಳು ಹಾಗೂ ಸುಲಭ ವಿಧಾನಗಳ ಮೂಲಕ ತೋಟಗಾರಿಕೆಯ ಮಾಡುವ ಕುರಿತು ಅವರಿಗೆ ಮಾಹಿತಿ ಲಭ್ಯವಾಗುತ್ತದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next