ಸಿಡ್ನಿ: ನಾಲ್ಕನೇ ದಿನದಾಟವನ್ನು “ಡೇ ಆಫ್ ಡಿಆರ್‌ಎಸ್ ರಿವ್ಯೂಸ್’ ಎಂದು ಬಣ್ಣಿಸಲಡ್ಡಿಯಿಲ್ಲ. ಇವುಗಳಲ್ಲಿ ಭಾರತ ಒಟ್ಟು 6 ರಿವ್ಯೂಗಳಲ್ಲಿ ಐದರಲ್ಲಿ ಯಶಸ್ಸು ಕಂಡಿತು. ಶುಭಮನ್ ಗಿಲ್ ವಿರುದ್ಧ ಸಲ್ಲಿಸಲಾದ ಡಿಆರ್‌ಎಸ್ ಮಾತ್ರ ಆಸೀಸ್ ಪರವಾಗಿ ಬಂತು.
ಮೊದಲ ರಿವ್ಯೂ ಯಶಸ್ಸು ಸಿಕ್ಕಿದ್ದು ಆರ್. ಅಶ್ವಿನ್‌ಗೆ. ಆಗ ಸ್ಟೀವನ್ ಸ್ಮಿತ್ ಅವರ ಬಿಗ್ ವಿಕೆಟ್ ಬಿತ್ತು. ಲೆಗ್ ಬಿಫೋರ್ ಮನವಿಯನ್ನು ಅಂಪಾಯರ್ ತಳ್ಳಿ ಹಾಕಿದಾಗ ಭಾರತ ಡಿಆರ್‌ಎಸ್ ತೆಗೆದುಕೊಂಡಿತು. ಸ್ಮಿತ್ ಔಟಾದದ್ದು ಖಾತ್ರಿಯಾಯಿತು. ಅದೇ ರೀತಿ ಗ್ರೀನ್ ವಿಕೆಟ್ ಉರುಳಿದ್ದು ಕೂಡ ಡಿಆರ್‌ಎಸ್ ಮೂಲಕವೇ ಖಚಿತಗೊಂಡಿತ್ತು.
8ನೇ ಓವರ್‌ನಲ್ಲಿ ರೋಹಿತ್ ಶರ್ಮ ಬಲವಾದ ಲೆಗ್ ಬಿಫೋರ್ ಮನವಿಯಿಂದ ಬಚಾವಾದದ್ದು ಕೂಡ ಡಿಆರ್‌ಎಸ್ ಮೂಲಕವೇ. ದಿನದ ಕೊನೆಯ ರಿವ್ಯೂ ಪಾಸ್ ಆದವರು ಚೇತೇಶ್ವರ್ ಪೂಜಾರ. ಅಂಪಾಯರ್ ಎಲ್‌ಬಿ ಕೊಡದಿದ್ದಾಗ ಆಸೀಸ್ ರಿವ್ಯೂ ತೆಗೆದುಕೊಂಡಿತ್ತು.
ಬ್ರಿಸ್ಬೇನ್‌ನಲ್ಲೇ ಸಾಗಲಿದೆ ಅಂತಿಮ ಟೆಸ್ಟ್ ಪಂದ್ಯ :
ಬ್ರಿಸ್ಬೇನ್: ಕಠಿನ ಕ್ವಾರಂಟೈನ್ ನಿಯಮದ ಹೊರತಾಗಿಯೂ ಭಾರತ-ಆಸ್ಟ್ರೇಲಿಯ ನಡುವಿನ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ವೇಳಾಪಟ್ಟಿಯಂತೆ ಬ್ರಿಸ್ಬೇನ್‌ನಲ್ಲೇ ನಡೆಯುವುದು ಖಾತ್ರಿಯಾಗಿದೆ. ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯದ ಅಧಿಕಾರಿಗಳು ಕಳೆದೊಂದು ವಾರದಿಂದ ಸತತ ಮಾತುಕತೆ ನಡೆಸಿ ಈ ಗೊಂದಲವನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕ್ರಿಕೆಟಿಗೆ ಸಂದ ಗೆಲುವು ಎಂಬುದಾಗಿ ಸಿಎ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.