ಮೈಸೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಹಿರಿಯ ಸದಸ್ಯೆ ಸುನಂದಾ ಪಾಲನೇತ್ರ ಸೋಲಿನಿಂದ ಬೇಸರ ಗೊಂಡಿದ್ದು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಈ ಬಾರಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಮೇಯರ್ ಪಟ್ಟ ಪಡೆಯಲು ಕಸರತ್ತು ನಡೆಸಿದ್ದ ಬಿಜೆಪಿಗೆ ಕೊನೆ ಕ್ಷಣದಲ್ಲಿ ಮರ್ಮಾಘಾತ ವಾಗಿತ್ತು. ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸುನಂದಾ ಪಾಲನೇತ್ರ ಅವರು ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ವಿರುದ್ಧ ಸೋಲನುಭವಿಸಿದ್ದರು. ಇದರಿಂದಾಗಿ ಬೇಸರಗೊಂಡಿರುವ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಉತ್ತಮ ಅವಕಾಶ ಇತ್ತು. ಪಕ್ಷದ ನಾಯಕರು ಮತ್ತಷ್ಟು ಓಡಾಡಿದ್ದರೆ ಮೇಯರ್ ಸ್ಥಾನ ಸಿಗುತ್ತಿತ್ತು. ಆದರೆ, ಪಕ್ಷದ ನಾಯಕರು ಸರಿಯಾಗಿ ಸ್ಪಂದಿಸಲಿಲ್ಲವೆಂದು ಅತೃಪ್ತಿ ವ್ಯಕ್ತಪಡಿಸಿ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬೇಸರ ವ್ಯಕ್ತಪಡಿಸಿರುವ ಸುನಂದಾ ಪಾಲನೇತ್ರ, “ನನ್ನಿಂದ ಯಡಿಯೂರಪ್ಪನವರಿಗೆ ಅವ ಮಾನ, ನೋವು ಆಯಿತು. ನಾನಲ್ಲದೆ ಬೇರೆ ಯಾರಾ ದರೂ ಅಭ್ಯರ್ಥಿ ಆಗಿದ್ದರೆ ಮೇಯರ್ ಆಗುತ್ತಿದ್ದರೇನೋ. ನನಗೆ ಕೆಲಸ ಮಾಡಲು ಆಗುತ್ತಿಲ್ಲ. ಹಾಗಾಗಿ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ. ನನಗೆ ಟಿಕೆಟ್ ಕೊಟ್ಟಿದ್ದು ಸಿಎಂ ಬಿಎಸ್‌ವೈ. ಅದಕ್ಕಾಗಿ ಅವರಿಗೆ ಹಾಗೂ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ನೀಡುವ ಬಗ್ಗೆ ಸಹಮತ ನೀಡುವಂತೆ ಪತ್ರ ಬರೆದಿದ್ದೇನೆ’ ಎಂದರು.
ಇದು ರಾಜಕೀಯ ದೊಂಬರಾಟ ಎಂದು ಗೊತ್ತಿತ್ತು. ಕಣ್ಣೀರು ತುಂಬಿಕೊಂಡೆ ಪಾಲಿಕೆ ಪ್ರವೇಶಿಸಿದ್ದೆ. ನನಗಾಗಿ ಬಿಜೆಪಿ ನಾಯಕರು ಸಚಿವರು, ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡಿದರು. ನನ್ನ ಪರವಾಗಿ ಎಲ್ಲರ ಬಳಿ ಕೈ ಮುಗಿದರು. ಸಿಎಂ ನನ್ನ ಮನೆಗೆ ಬಂದಾಗಲೂ ನಾನು ಅವರಿಗೆ ಗೆಲ್ಲುವ ಭರವಸೆ ಕೊಟ್ಟಿದ್ದೆ ಎಂದು ದುಃಖೀತರಾದರು. ರಾಜಕೀಯ ಸಾಕಾಗಿದೆ: ಯಡಿಯೂರಪ್ಪ, ಹೈಕಮಾಂಡ್ ಎಲ್ಲರು ಭಾಗಿಯಾಗಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇ ನನಗೆ ನೋವಾಗಿದೆ. ರಾಜಕೀಯ ಕೆಟ್ಟದಲ್ಲ, ಆದರೆ ನನ್ನಿಂದ ಕೆಟ್ಟದಾಯಿತು. ಸಮಾಜಸೇವೆ ಎಂದುಕೊಂಡು ಕೆಲಸ ಮಾಡುತ್ತಿದ್ದೆ. ನನ್ನ ಸೇವೆಗೆ ಬೆಲೆಯೇ ಇರಲಿಲ್ಲ. ನನ್ನ ಜೊತೆಗೆ ಇದ್ದವರು ಎಂಎಲ್‌ಎ, ಮಿನಿಸ್ಟರ್ ಆಗಿದ್ದಾರೆ. ರಾಜಕೀಯದಲ್ಲಿ ಹಿರಿಯರಾಗಬಾರದು. ಕಳ್ಳ ಕದ್ದು ಓಡೋದರೆ ಹಿಡಿಯಬಹುದು. ಈ ರೀತಿ ಮೋಸ ಮಾಡಿದರೆ ಹೇಗೆ ನಂಬುವುದು. ಈ ಚುನಾವಣೆ ಯಡಿಯೂರಪ್ಪನವರ ಪ್ರತಿಷ್ಠೆಯಾಗಿತ್ತು. ವಾರ್ಡ್‌ನಲ್ಲಿ ಸೋತಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಪಾಲಿಕೆ ಒಳಗೆ ಯಡಿಯೂರಪ್ಪನವರಿಗೆ ಸೋಲಾಗಿದೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ಆದರೆ ನಾನು ಎಳ್ಳಷ್ಟು ತಪ್ಪು ಮಾಡಿಲ್ಲ ಎಂದು ಭಾವುಕರಾದರು.