Advertisement

ಸುನಾದ ಯುವದನಿಯಲ್ಲಿ ಅನೀಶ್‌ ಗಾಯನ

03:50 AM Apr 14, 2017 | |

ಸಂಗೀತವು ಮನಸ್ಸಿಗೆ ಆಹ್ಲಾದವನ್ನೊದಗಿಸುವ ಕಲೆ. ಈ ಕಾರಣದಿಂದ ಅದು ಆಕರ್ಷಕವಾದ ಮಾನಸ ಸಂಪರ್ಕ ಮಾಧ್ಯಮ. ಆಡಿದ ಮಾತಿಗಿಂತ ಹಾಡಿದ ಮಾತು ಲೇಸು ಎಂಬ ನಾಣ್ನುಡಿ ಅರ್ಥಪೂರ್ಣವಾದುದು ಈ ಕಾರಣದಿಂದಲೇ. ಭಗವಂತನ ಸಾಕ್ಷಾತ್ಕಾರಕ್ಕೆ ಅತ್ಯಂತ ಸುಲಭ ಹಾಗೂ ಉತ್ಕೃಷ್ಟವಾದ ಮಾರ್ಗವೇ ಸಂಗೀತಾರಾಧನೆ. ಮಾನವನ ಲೌಕಿಕ ಜಂಜಾಟವನ್ನು ಸಡಿಲ ಮಾಡಿ ಅವನನ್ನು ಮಾನವೀಯತೆಗೆ ಒಯ್ದು, ಸುಸಂಸ್ಕೃತನನ್ನಾಗಿ ಮಾಡುವ ಏಕೈಕ ಸಾಧನವೇ ಸಂಗೀತ ಕಲೆ. ಇಂತಹ ಸಂಗೀತ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಬಹಳ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಪುತ್ತೂರಿನ ಸುನಾದ ಸಂಗೀತ ಕಲಾ ಶಾಲೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇವುಗಳಲ್ಲಿ ಬಹಳ ಮುಖ್ಯವಾದುದು “ಸುನಾದ ಯುವದನಿ’ ಕಾರ್ಯಕ್ರಮ. ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸುನಾದ ಯುವ ದನಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮಾಲಿಕೆಯ 152ನೇ ಕಾರ್ಯಕ್ರಮವು ಎಪ್ರಿಲ್‌ 2ರಂದು ಪುತ್ತೂರಿನ ಸುನಾದ ಸಭಾಂಗಣದಲ್ಲಿ ಸಂಪನ್ನಗೊಂಡಿತು.

Advertisement

ಈ ಸಂಚಿಕೆಯ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಯನ್ನು ಉದಯೋನ್ಮುಖ ಕಲಾವಿದರಾದ ಅನೀಶ್‌ ವಿ. ಭಟ್‌ ಬಹಳ ಪ್ರೌಢ ರೀತಿಯಲ್ಲಿ ನಡೆಸಿ ಕೊಟ್ಟರು. ಇವರಿಗೆ ವಯಲಿನ್‌ನಲ್ಲಿ ಕಾರ್ತಿಕೇಯ ಆರ್‌. ಬೆಂಗಳೂರು, ಮೃದಂಗದಲ್ಲಿ ಅಕ್ಷಯ ನಾರಾಯಣ  ಕಾಂಚನ ಹಾಗೂ ಘಟಂನಲ್ಲಿ ವಿ| ಮೈಸೂರು ಮಂಜುನಾಥ್‌ ಸಹಕರಿಸಿದರು. 

ಕಲಾವಿದರು ಅಭೋಗಿ ರಾಗದ ವರ್ಣ ಎವ್ವರಿಬೋಧದೊಂದಿಗೆ ಕಛೇರಿಯನ್ನು ಆರಂಭಿಸಿದರು. ಬಳಿಕ ಧೇನುಕ‌ ರಾಗದ ಪ್ರಸಿದ್ಧ ಕೃತಿ ತೆಲಿಯಲೇರು ರಾಮ ಚುರುಕಾದ ಸ್ವರಪ್ರಸ್ತಾರದೊಂದಿಗೆ ಭಕ್ತಿಪ್ರಧಾನವಾಗಿ ಮೂಡಿಬಂತು. ಅನಂತರದ ಅಠಾಣ ರಾಗ, ವಿಳಂಬ ಲಯದ ಬಾಲಕನಕಮಯ ಎಂಬ ಕೃತಿಯು ಮನೋಜ್ಞವಾಗಿ ಮೂಡಿಬಂತು. ತದನಂತರ ಬಿಲಹರಿ ರಾಗದ ಖಂಡಛಾಪು ತಾಳದ ತೊಲಿಜನ್ಮ ಕೃತಿಯು ಸೊಗಸಾದ ಆಲಾಪನೆಯೊಂದಿಗೆ ಪ್ರಸ್ತುತಗೊಂಡಿತು. ಸಾರಸಾಂಗಿ ರಾಗದ ಸ್ವಾತಿ ತಿರುನಾಳ್‌ರವರ ಪ್ರಸಿದ್ಧ ಕೃತಿ ಜಯ ಜಯ ಪದ್ಮನಾಭ ಕೃತಿಯು ಉತ್ತಮವಾದ ಸ್ವರಪ್ರಸ್ತಾರದೊಂದಿಗೆ ಸಂಗೀತ ರಸಿಕರನ್ನು ಭಾವಪೂರ್ಣಗೊಳಿಸುವಲ್ಲಿ ಯಶಸ್ವಿಯಾಯಿತು.

ಕಲಾವಿದರು ಕಾರ್ಯಕ್ರಮದ ಪ್ರಧಾನ ಕೃತಿಯಾಗಿ ಸಾರ್ವಕಾಲಿಕ ರಾಗವಾದ ಕಲ್ಯಾಣಿಯ ವಿಳಂಬ ಲಯದ ಏತವುನ್ನರ ಕೃತಿಯನ್ನು ಬಹಳ ಉತ್ಕೃಷ್ಟ ರೀತಿಯಲ್ಲಿ, ವಿದ್ವತ್‌ಪೂರ್ಣವಾಗಿ ಪ್ರಸ್ತುತಪಡಿಸಿದರು. ರಾಗ ಆಲಾಪನೆಯಲ್ಲಿ ದಾಟು ಪ್ರಯೋಗ, ದೀರ್ಘ‌ ಸ್ವರ, ಷಡ್ಜ ಪಂಚಮಗಳನ್ನು ವಜ್ಯì ಮಾಡಿ ಹಾಡಿದ ಪರಿ ಬಹಳ ಅನನ್ಯವಾಗಿತ್ತು. ಸೀತಾಗೌರಿ ಎಂಬಲ್ಲಿನ ನೆರವಲ್‌, ಸ್ವರ ಪ್ರಸ್ತಾರಗಳಲ್ಲಿ ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದರು. ವಯಲಿನ್‌ನಲ್ಲಿ ಕಾರ್ತಿಕೇಯ ಉತ್ತಮವಾಗಿ ಸಹಕರಿಸಿದರು. ಕಛೇರಿಗೆ ಪೂರಕವಾಗಿ ಮೃದಂಗದಲ್ಲಿ ಅಕ್ಷಯ ನಾರಾಯಣ ಕಾಂಚನ ಹಾಗೂ ಘಟಂನಲ್ಲಿ ವಿ| ಮೈಸೂರು ಮಂಜುನಾಥ್‌ರವರ ತನಿ ಆವರ್ತನವು ಸಂಗೀತ ರಸಿಕರ ಮನ ರಂಜಿಸಿತು. ಬಳಿಕ ಎಂ. ಡಿ. ರಾಮನಾಥ್‌ ಅವರ ರಚನೆಯಾದ ಬಾಗೇಶ್ರೀ ರಾಗದ ಸಾಗರ ಶಯನ ಬಹಳ ಭಾವ ಪೂರ್ಣವಾಗಿ ಮೂಡಿಬಂತು. ಪವಮಾನದೊಂದಿಗೆ  ಕಾರ್ಯಕ್ರಮ ಮುಕ್ತಾಯಗೊಂಡಿತು. 

 ವಿ| ಶಿಲ್ಪಾ ಸಿ. ಎಚ್‌. ಹಾಗೂ ಡಾ| ರಾಮಕೃಷ್ಣ ಭಟ್‌ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರತೀ ತಿಂಗಳ ಮೊದಲ ರವಿವಾರದಂದು ನಡೆಯುತ್ತಿರುವ “ಸುನಾದ ಯುವದನಿ’ ಪೂರ್ಣಪ್ರಮಾಣದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿರುವುದು ನಿಜಕ್ಕೂ ಪ್ರಶಂಸನೀಯ. 

Advertisement

ಸಂಧ್ಯಾ ಸತ್ಯನಾರಾಯಣ್‌

Advertisement

Udayavani is now on Telegram. Click here to join our channel and stay updated with the latest news.

Next