Advertisement

ಸೂರ್ಯವಂಶದ ರಾಜ “ಸೌದಾಸ” ರಾಕ್ಷಸನಾಗಿ ಸಂತಾನಹೀನನಾದ ರಹಸ್ಯ…

11:50 AM Aug 21, 2018 | |

ಹರಿಶ್ಚಂದ್ರ ಹಾಗೂ ಭಗೀರಥರು ಹುಟ್ಟಿದ ಸೂರ್ಯವಂಶದಲ್ಲೇ ಸೌದಾಸನೆಂಬ ಮತ್ತೊಬ್ಬ ರಾಜನು ಜನಿಸುತ್ತಾನೆ. ಅವನು
ಎಲ್ಲರೊಂದಿಗೆ ಬಹಳ ಸ್ನೇಹಮಯಿಯಾಗಿದ್ದ ಕಾರಣ ಅವನನ್ನು ಎಲ್ಲರೂ ಮಿತ್ರಸಹನೆಂದು ಕರೆಯುತ್ತಿದ್ದರು. ಈತನ ಪತ್ನಿ
ಮದಯಂತಿ . ರಾಜನು ಪ್ರಜಾರಕ್ಷಕನೂ, ಸತ್ಕರ್ಮಗಳನ್ನು ಮಾಡುತ್ತಾ ನಿಷ್ಠೆಯಿಂದ ರಾಜ್ಯಭಾರವನ್ನು ಮಾಡುತ್ತಿದ್ದನು.

Advertisement

ಹೀಗಿರಲು ಒಂದು ದಿನ ಸೌದಾಸನು ಕ್ರೂರಮೃಗಗಳನ್ನು ಬೇಟೆಯಾಡಲು ಕಾಡಿಗೆ ಹೋಗಿರಲು ಅಲ್ಲಿ ಪ್ರಜಾಕಂಟಕನಾದ ರಾಕ್ಷಸನನ್ನು ಸಂಹರಿಸಿದನು.  ಆ ರಾಕ್ಷಸನ ತಮ್ಮನ್ನು ಅಣ್ಣನ ಸಾವಿನ ಸೇಡನ್ನು ತೀರಿಸಿಕೊಳ್ಳಲು ವೇಷ ಬದಲಿಸಿಕೊಂಡು ರಾಜನ ಸೇವೆಯನ್ನು ಮಾಡಿ ಬಹಳ ನಿಷ್ಠಾವಂತನೆಂದು ತೋರಿಸಿಕೊಂಡು ರಾಜನ ವಿಶ್ವಾಸವನ್ನು ಸಂಪಾದಿಸಿದನು. ರಾಜನಾದರೂ ಇವನಲ್ಲಿ ಬಹಳ ವಿಶ್ವಾಸವಿಟ್ಟು ಅರಮನೆಗೆ ಕರೆದೊಯ್ದು ಅಡುಗೆ ಮನೆಯ ಮೇಲುಸ್ತುವಾರಿಯನ್ನು ವಹಿಸಿದನು. ಆ ರಾಕ್ಷಸನು ತಾನಂದುಕೊಂಡಂತೆ ರಾಜನ ಮೇಲೆ ಸೇಡು ತೀರಿಸಿಕೊಳ್ಳುವ ಸಮಯಕೋಸ್ಕರ ಕಾಯುತ್ತಿದ್ದನು.

ಒಂದು ದಿನ ಅರಮನೆಗೆ ವಸಿಷ್ಠರು ಆಗಮಿಸಿದ್ದರು. ಈ ವೇಳೆ ರಾಜನಿಗೆ ಕೆಡುಕನ್ನು ಬಯಸುತ್ತಿದ್ದ ಮಾಯಾವಿ ರಾಕ್ಷಸನು, ಸೇಡುತೀರಿಸಿಕೊಳ್ಳಲು ಇದುವೇ ಸೂಕ್ತ ಸಮಯವೆಂದು ತಿಳಿದು ವಸಿಷ್ಠರಿಗೆ ನರಮಾಂಸವನ್ನು ಉಣ ಬಡಿಸಿದ್ದ. ತನಗೆ ನರಮಾಂಸ ಬಡಿಸಿದ್ದನ್ನು ಅರಿತ ವಸಿಷ್ಠರು ಕೋಪದಿಂದ ಕೆಂಡಾಮಂಡಲವಾಗಿ , ರಾಜನ್ , ಅನಾಗರಿಕವಾಗಿ ಊಟ ತಯಾರಿಸಿ ಬಡಿಸಿ ನನಗೆ 
ಅಪಚಾರವೆಸಗಿದ ಕಾರಣ ರಾಕ್ಷಸನಾಗಿ ಹೋಗು ಎಂದು ಶಪಿಸಿದರು. ಇದರಲ್ಲಿ ತನ್ನ ತಪ್ಪಿಲ್ಲವೆಂದು ರಾಜನು ಪರಿಪರಿಯಾಗಿ ಬೇಡಿಕೊಳ್ಳಲು, ರಾಕ್ಷಸನು ಮಾಡಿದ ಕೃತ್ಯವನ್ನು ತಮ್ಮ ದಿವ್ಯದೃಷ್ಟಿಯಿಂದ ಅರಿತ ವಸಿಷ್ಠರು, ರಾಜಾ… ಇದರಲ್ಲಿ ನಿನ್ನ ತಪ್ಪಿಲ್ಲವಾದರೂ ಒಮ್ಮೆ ಕೊಟ್ಟ ಶಾಪವನ್ನು ಹಿಂದಕ್ಕೆ ಪಡೆಯಲು ಅಸಾಧ್ಯವಾದ ಕಾರಣ ಆ ಶಾಪವನ್ನು ನೀನು ಹನ್ನೆರಡು ವರ್ಷ ಸೀಮಿತಗೊಳಿಸಿದ್ದೇನೆ ಎಂದು ಹೇಳಿದರು.

ಇದನ್ನು ಕೇಳಿದ ಸೌದಾಸನು ಬಹಳ ಕೋಪಗೊಂಡು ಬೊಗಸೆಯಲ್ಲಿ ಜಲವನ್ನು ಹಿಡಿದು ಮಂತ್ರಿಸಿ ವಸಿಷ್ಠರಿಗೆ ಪ್ರತಿಶಾಪವನ್ನೀಯಲು ಮುಂದಾದನು. ಇದನ್ನರಿತ ಮದಯಂತಿಯು ಗುರುಗಳಿಗೆ ಶಪಿಸುವುದು ಹೇಯಕೃತ್ಯವಾಗಿದೆ. ಇದು ನಿಮಗೆ ಶೋಭೆಯಲ್ಲ ಎಂದು ರಾಜನನ್ನು ತಡೆದಳು. ರಾಜನಿಗೆ ತನ್ನ ತಪ್ಪಿನ ಅರಿವಾಗಿ ಮಂತ್ರ ಜಲವನ್ನು ಭೂಮಿಯಲ್ಲಿ ಚೆಲ್ಲಿದರೆ ಅದರಿಂದ ಅನಾಹುತವಾಗಬಹುದೆಂದು ಭಾವಿಸಿ ಅದನ್ನು ತನ್ನ ಕಾಲಮೇಲೆಯೇ ಹಾಕಿಕೊಂಡನು. ಮಂತ್ರಜಲದ ಪ್ರಭಾವದಿಂದ ಅವನ ಕಾಲುಗಳು ಕಪ್ಪಾದವು. ಇದರಿಂದ ಅವನಿಗೆ ಕಲ್ಮಷ ಪಾದನೆಂಬ ಹೆಸರಾಯಿತು.

ಗುರುಶಾಪದಿಂದ ರಾಕ್ಷಸನಾದ ಕಲ್ಮಷಪಾದನು ಕಾಡಿನಲ್ಲಿ ಅಲೆದಾಡುತ್ತಿರಲು ರತಿಕ್ರೀಡಾಸಕ್ತರಾದ ಬ್ರಾಹ್ಮಣ ದಂಪತಿಗಳನ್ನು ನೋಡಿದನು. ಹಸಿವಿನಿಂದ ಕಂಗೆಟ್ಟಿದ್ದ ರಾಕ್ಷನು ಬ್ರಾಹ್ಮಣನನ್ನು ಭಕ್ಷಿಸುವುದಕ್ಕೋಸ್ಕರ ಹಿಡಿದುಕೊಂಡನು. ಆಗ ಆ ಬ್ರಾಹ್ಮಣನ ಪತ್ನಿಯು ತನ್ನ ಪತಿಯನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರೂ, ಬಹಳ ಹಸಿದಿದ್ದ ರಾಕ್ಷಸನು ಅವಳ ಮಾತಿಗೆ ಕಿವಿಗೊಡದೆ ಬ್ರಾಹ್ಮಣನನ್ನು ಭಕ್ಷಿಸಿದನು. ಪತಿಯ ವಿರಹದಿಂದ ದುಃಖಿತಳಾದ ಸಾದ್ವಿಯೂ ಕ್ರೋಧಗೊಂಡು  ಸಂತಾನಾಪೇಕ್ಷಿಯಾದ ನನ್ನ ಪತಿಯನ್ನು ಭಕ್ಷಿಸಿದ ನೀನು ಶಾಪವಿಮೋಚನೆಯಾಗಿ ಪುನಃ ರಾಜನಾದ ಮೇಲೆ ನಿನ್ನ ಪತ್ನಿಯೊಂದಿಗೆ ಸೇರಿದರೆ ನಿನಗೆ ಮರಣ
ಸಂಭವಿಸುವುದು ಎಂದು ಶಪಿಸಿ, ಪತಿವ್ರತೆಯಾದ ಸಾದ್ವಿಯೂ ಪತಿಯ ಅಸ್ಥಿಗಳನ್ನು ಸಂಗ್ರಹಿಸಿ ಚಿತೆಯನ್ನು ರಚಿಸಿ ಅಸ್ಥಿಗಳನ್ನು ಇಟ್ಟು ತಾನು ಸಹಗಮನ ಮಾಡಿ ಸದ್ಗತಿಯನ್ನು ಹೊಂದಿದಳು. ಹನ್ನೆರಡು ವರ್ಷಗಳ ನಂತರ ಸೌದಾಸನು ಶಾಪವಿಮುಕ್ತನಾಗಿ ಅರಮನೆಗೆ ಹಿಂದಿರುಗಿ ಹೆಂಡತಿಯನ್ನು ಕಂಡೊಡನೆ ಸಾದ್ವಿಯೂ ಕೊಟ್ಟ ಶಾಪವು ನೆನಪಾಗಿ ತನ್ನ ಹೆಂಡತಿಗೆ ಅದರ ವೃತ್ತಾಂತವನ್ನು ತಿಳಿಸಿದನು. ನಂತರ ರಾಜನು ಸ್ತ್ರೀಸುಖವನ್ನು ಸಂಪೂರ್ಣವಾಗಿ ಪರಿತ್ಯಜಿಸಿ, ತನ್ನ ಕರ್ಮಫಲದಿಂದಾಗಿ ಸಂತಾನ ಹೀನನಾದನು. ಸಂತಾನವಿಲ್ಲದ ರಾಜನ ಅನುಮತಿಯನ್ನು ಪಡೆದು ವಸಿಷ್ಠರು ಮದಯಂತಿಗೆ ಗರ್ಭಧಾನವನ್ನು ಮಾಡಿದರು. ಗರ್ಭವತಿಯಾದ ಮದಯಂತಿಯು ಏಳು ವರ್ಷವಾದರೂ ಪ್ರಸವಿಸದಿರಲು ವಸಿಷ್ಠರು ಅವಳ ಹೊಟ್ಟೆಯನ್ನು ಕಲ್ಲಿನಿಂದ ಕುಟ್ಟಿದಾಗ ಶಿಶುವಿನ ಜನನವಾಯಿತು. ಕಲ್ಲಿನ ಏಟಿನಿಂದ ಹುಟ್ಟಿದ ಆ ಮಗುವಿಗೆ ಅಶ್ಮಕ ನೆಂದು ನಾಮಕರಣ ಮಾಡಿದರು.

Advertisement

ಪರಶುರಾಮನು ಕ್ಷತ್ರೀಯರನ್ನೆಲ್ಲ ಸಂಹರಿಸುತ್ತ ಬರಲು ಅಶ್ಮಕನ ಪುತ್ರನಾದ ಮೂಲಕನನ್ನು ಸ್ತ್ರೀಯರು ಅಡಗಿಸಿಟ್ಟರು. ಇದರಿಂದ ಅವನಿಗೆ ನಾರಿಕವಚ ನೆಂದು ಹೆಸರಾಯಿತು. ಭೂಮಿಯು ಕ್ಷತ್ರೀಯ ರಹಿತವಾದಾಗ ಸ್ತ್ರೀಯರಿಂದ ರಕ್ಷಿಸಲ್ಪಟ್ಟ ಅಶ್ಮಕನ ಮಗನಿಂದ ಕ್ಷತ್ರೀಯ ಕುಲವು ಮುಂದುವರೆದ ಕಾರಣ ಆತನಿಗೆ ಮೂಲಕನೆಂಬ ಹೆಸರು ಬಂದಿತು.

ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next