Advertisement

ಪೂರ್ಣಗೊಳ್ಳದ ಜಲಸಿರಿ ನಗರಕ್ಕೆ ಬೇಸಗೆಯ ಚಿಂತೆ

08:05 PM Sep 26, 2021 | Team Udayavani |

ಮಳೆಯ ಅಬ್ಬರ ಇಳಿಮುಖಗೊಂಡು ಬೇಸಗೆಯ ಬಿಸಿ ನಿಧಾನವಾಗಿ ಆವರಿಸುತ್ತಿದೆ. ಇದರರ್ಥ ನದಿ, ತೋಡು, ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿ ದಿನ ಬಳಕೆಯ ನೀರಿಗಾಗಿ ಎಚ್ಚೆತ್ತುಕೊಳ್ಳಬೇಕು ಎಂಬ ಸಂದೇಶವದು. ಪುತ್ತೂರು ನಗರದಲ್ಲಿ ನೀರಿನ ಬರ ಬಾರದ ಹಾಗೆ ಎರಡು ವರ್ಷದ ಹಿಂದೆ ಪ್ರಾರಂಭಗೊಂಡಿರುವ ಜಲಸಿರಿ ಯೋಜನೆ ಕಾಮಗಾರಿ ವೇಗ ಪಡೆದುಕೊಳ್ಳದಿರುವುದು ಈ ಬೇಸಗೆಯಲ್ಲೂ ನೀರಿನ ಕೊರತೆ ಎದುರಿಸುವ ಆತಂಕಕ್ಕೆ ಕಾರಣವಾಗಿದೆ.

Advertisement

ಸುಮಾರು 31 ವಾರ್ಡ್‌ಗಳನ್ನು ಹೊಂದಿರುವ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 60 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ನಗರಕ್ಕೆ ವರ್ಷವಿಡೀ ಉಪ್ಪಿನಂಗಡಿಯ ಕುಮಾರಧಾರಾ ನದಿ ನೀರೇ ಪ್ರಮುಖ ಆಧಾರ. ಕೊಳಬೆಬಾವಿ ಕೈ ಕೊಟ್ಟರೆ ನದಿ ನೀರನ್ನೇ ನಂಬಿರುವ ನಗರದಲ್ಲಿ ನೀರಿನ ಬವಣೆಯನ್ನು ಶಾಶ್ವತವಾಗಿ ನೀಗಿಸುವ ನಿಟ್ಟಿನಲ್ಲಿ 113 ಕೋಟಿ ರೂಪಾಯಿ ವೆಚ್ಚದಲ್ಲಿ ನಿರಂತರ ನೀರು ಸರಬರಾಜು ಮಾಡುವ
ಜಲಸಿರಿ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಎರಡು ವರ್ಷ ಕಳೆದರೂ ಕಾಮಗಾರಿ ಶೇ.50ರಷ್ಟು ಕೂಡ ಪೂರ್ಣಗೊಂಡಿಲ್ಲ.

71.46 ಕೋಟಿ ರೂ. ಕಾಮಗಾರಿ ವೆಚ್ಚ ಮತ್ತು 41.62 ಕೋಟಿ ರೂ. 8 ವರ್ಷದ ನಿರ್ವಹಣ ವೆಚ್ಚವಿದ್ದು 2020ರ ಡಿಸೆಂಬರ್‌ ಒಳಗಾಗಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ನಗರಸಭೆ ಹೇಳಿದ್ದರೂ 2021 ಮುಗಿಯುವ ಹಂತಕ್ಕೆ ಬಂದರೂ ಕಾಮಗಾರಿ ಗುರಿ ತಲುಪುವ ಲಕ್ಷಣ ಕಂಡು ಬಂದಿಲ್ಲ. ಗುತ್ತಿಗೆ ಸಂಸ್ಥೆಯ ಕೋರಿಕೆಯ ಮೇರೆಗೆ 2022 ಜನವರಿಗೆ ಗಡುವು ನೀಡಿದ್ದರೂ ಆ ಅವಧಿಗೂ ಪೂರ್ಣಗೊಳ್ಳುವುದು ಅನುಮಾನ ಎನ್ನುತ್ತಿದೆ ಸದ್ಯದ ಚಿತ್ರಣ.

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 775 ಪ್ರಕರಣ| 860 ಸೋಂಕಿತರು ಗುಣಮುಖ

ಜಲಸಿರಿ ಯೋಜನೆಯಲ್ಲಿ ಹೆಚ್ಚುವರಿ ಸಾಮರ್ಥ್ಯದ ಯಂತ್ರ ಬಳಸಿ ನೆಕ್ಕಿಲಾಡಿ ಅಣೆಕಟ್ಟಿನಿಂದ ಎತ್ತಲಾಗುವ ನೀರನ್ನು ರೇಚಕ ಸ್ಥಾವರದಲ್ಲಿ ಶುದ್ಧೀಕರಿಸಿ ನಗರಕ್ಕೆ ಪೂರೈಸುವುದಾಗಿದೆ. ನೆಕ್ಕಿಲಾಡಿಯಿಂದ ಎಕ್ಸ್‌ಪ್ರೆಸ್‌ ಫೀಡರ್‌ನ ವಿದ್ಯುತ್‌ ಬಳಸಿ ನೀರು ಸರಬರಾಜು ಮಾಡುವುದು, ಬಳಿಕ ನಗರ ವ್ಯಾಪ್ತಿಯೊಳಗೆ ವಿದ್ಯುತ್‌ ಬಳಸದೆ ಭೌಗೋಳಿಕವಾದ ಇಳಿಜಾರನ್ನು ಬಳಸಿ ನಳ್ಳಿ ಮೂಲಕ ನೀರು ಸಂಪರ್ಕಿಸುವುದು ಯೋಜನೆಯ ಮುಖ್ಯಾಂಶ. ಪ್ರಸ್ತುತ ನೀರು ಸಂಗ್ರಹಕ್ಕೆ ನಗರದೊಳಗೆ 4 ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಹಂತದಲ್ಲಿದ್ದು ಎರಡು ಮಾತ್ರ ಪೂರ್ಣಗೊಂಡಿದೆ. ಉಳಿದ ಎರಡು ಇನ್ನೂ ಅಡಿಪಾಯ ಹಂತದಲ್ಲೇ ಇದೆ.

Advertisement

ಪೈಪ್‌ಲೈನ್‌ ಕಾಮಗಾರಿ 2020ರ ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಕೋವಿಡ್‌ ಲಾಕ್‌ಡೌನ್‌, ಕಾರ್ಮಿಕರ ಕೊರತೆ ಇತ್ಯಾದಿ ಕಾರಣಗಳಿಂದ ಅದಿನ್ನೂ ಗುರಿ ತಲುಪಿಲ್ಲ ಎನ್ನುವ ಉತ್ತರ ಬಂದಿದೆ. ಇದುವರೆಗೆ ಶೇ. 50ರಷ್ಟು ಪೈಪ್‌ ಅಳವಡಿಸುವ ಕಾಮಗಾರಿಯಷ್ಟೇ ಆಗಿದೆ.
ಜನರ ನೀರಿನ ಸಮಸ್ಯೆ ಪರಿಹಾರ ಆಗಬೇಕೆಂಬ ನಿಟ್ಟಿನಲ್ಲಿ ಸರಕಾರ ಆರಂಭಿಸಿರುವ ಯೋಜನೆ ಉತ್ತಮವಾಗಿದ್ದರೂ ಅದನ್ನು ನಿಗದಿತ ಸಮಯದೊಳಗೆ ಜಾರಿಗೊಳಿಸುವ ಪ್ರಕ್ರಿಯೆಯೂ ಆಗಬೇಕು. ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ನಗರಕ್ಕೆ ಶಾಶ್ವತ ನೀರೋದಗಿಸುವ ಯೋಜನೆ ಪೂರ್ಣಗೊಳ್ಳಲು ಇನ್ನೆ°ಷ್ಟು ಕಾಲ ಕಾಯಬೇಕು ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ.

-ಸಂ

Advertisement

Udayavani is now on Telegram. Click here to join our channel and stay updated with the latest news.

Next